ಡಿ.ಸಿ. ಆದೇಶಕ್ಕೆ ಸಚಿವರಿಂದಲೇ ಸವಾಲ್

ಡಿ.ಸಿ. ಆದೇಶಕ್ಕೆ ಸಚಿವರಿಂದಲೇ ಸವಾಲ್
Facebook
Twitter
LinkedIn
WhatsApp

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಕ್ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರರ ಆದೇಶಕ್ಕೆ ರಾಜ್ಯ ಸರಕಾರದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ದಂಪತಿಗಳು ಸವಾಲು ಹಾಕುವ ಮೂಲಕ ಪರೋಕ್ಷವಾಗಿ ಜಿಲ್ಲೆಯ ಕಾನೂನು-ನಿಯಮ ಉಲ್ಲಂಘಕರ ಬೆಂಬಲಕ್ಕೆ ನಿಂತಿದ್ದಾರೆ.ಕೊರೋನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ವೀಕ್‌ಎಂಡ್ ಕರ್ಫ್ಯೂ ಘೋಷಿಸಿ ಆದೇಶ ಹೊರಡಿಸಿದ್ದರು. ವೀಕ್‌ಎಂಡ್ ಕರ್ಫ್ಯೂ ಇರುವಾಗ ಸರಕಾರದ ಓರ್ವ ಜವಾಬ್ದಾರಿಯುತ ಸಚಿವನಾಗಿ ತನ್ನ ಪತ್ನಿ ಹಾಗೂ ಹಿಂಬಾಲಕರೊಡನೆ ಆಗಸ್ಟ್ 14ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾದದ್ದು ಸಚಿವ ಶಿವರಾಮ್ ಹೆಬ್ಬಾರ್ ಎಸಗಿದ ಕಾನೂನುಬಾಹಿರ ಎಡವಟ್ಟು. ವೀಕ್‌ಎಂಡ್ ಕರ್ಫ್ಯೂ ಪ್ರಯುಕ್ತ ಜಿಲ್ಲೆಯ ದೇವಾಲಯ, ಮಠ, ಮಂದಿರಗಳಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರವೇಶ ನಿರಾಕರಿಸಲಾಗಿತ್ತು. ಯಾವುದೇ ದರುಶನ, ಪೂಜೆ, ಪುನಸ್ಕಾರಗಳಿಗೆ ಅವಕಾಶವಿರಲಿಲ್ಲ. ಆದರೆ ಸಚಿವ ಶಿವರಾಮ್ ಹೆಬ್ಬಾರ್ ಚಾತುರ್ಮಾಸ್ಯ ದೀಕ್ಷೆ ತೊಟ್ಟು ಧ್ಯಾನನಿರತರಾಗಿರಬೇಕಾದ ಧರ್ಮಸ್ಥಳ ನಿತ್ಯಾನಂದನಗರ ಶ್ರೀ ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದಶ್ರೀಗಳನ್ನು ಭೇಟಿಯಾಗಿ ಪಾದಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದ್ದಲ್ಲದೇ, ಕ್ಷೇತ್ರದ ಪರವಾಗಿ ಬ್ರಹ್ಮಾನಂದ ಶ್ರೀಗಳಿಂದ ಸಮ್ಮಾನವನ್ನೂ ಸ್ವೀಕರಿಸಿದರು.‌ ಕಳೆದ ವಾರವಷ್ಟೇ ವೀಕ್‌ಎಂಡ್ ಕರ್ಫ್ಯೂ ಸಂದರ್ಭ ಸರಿಯಾದ ಮಾಹಿತಿ ಇರದೇ ಧರ್ಮಸ್ಥಳ ಸಹಿತ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಬಂದಿದ್ದ ಸಹಸ್ರಾರು ಭಕ್ತರು ಊಟವಿಲ್ಲದೇ, ದೇವರ ದರುಶನ ಭಾಗ್ಯವಿಲ್ಲದೇ, ಉಳಕೊಳ್ಳಲೂ ವ್ಯವಸ್ಥೆ ಇಲ್ಲದೇ ಕಂಗಾಲಾಗಿ ರಸ್ತೆ ಬದಿ ರಾತ್ರಿ ಕಳೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಆದರೆ ಸಚಿವ ಶಿವರಾಮ್ ಹೆಬ್ಬಾರ್ ಆಗಸ್ಟ್ 14ರ ಶನಿವಾರ ವೀಕ್‌ಎಂಡ್ ಕರ್ಫ್ಯೂ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ತೀರ್ಥಯಾತ್ರೆ ನಡೆಸಿ, ಇಲ್ಲಿನ‌ ಮಠಮಂದಿರಗಳಿಗೆ ಭೇಟಿ ನೀಡುವುದರ ಜೊತೆಗೆ ಒಂದಷ್ಟು ಸಾರ್ವಜನಿಕ‌ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಾನೂನಿಗೇ ಸವಾಲ್ ಹಾಕಿದ್ದಾರೆ; ಇಂತಹ ಸಚಿವರಿಗೆ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಸಹಿತ ಬಿಜೆಪಿಯ ಪ್ರಮುಖರು ಸಾಥ್ ನೀಡುತ್ತಾರಾದರೆ ಆಡಳಿತ ವ್ಯವಸ್ಥೆಯ ನೈತಿಕತೆ ಎಲ್ಲಿಗೆ ತಲುಪೀತು ಎಂದು ಗಂಭೀರವಾಗಿ ಯೋಚಿಸುವ ಸಂದಿಗ್ಧ ಸ್ಥಿತಿಗೆ ನಾವು ತಲುಪಿದ್ದೇವೆ ಎಂದಾಯಿತು. ಇವರ ದರ್ಬಾರಿನಲ್ಲಿ‌ ಬಡವರಿಗೊಂದು ಕಾನೂನು, ಉಳ್ಳವರಿಗೊಂದು ಕಾನೂನು… ಓಟು ನೀಡಿ ಆಯ್ಕೆ ಮಾಡಿದ ಮತದಾರರಿಗೆ ಇಂತಹದ್ದನ್ನು ಅನುಭವಿಸಲೇ ಬೇಕಾದ ಸಂದಿಗ್ಧತೆ.

Latest 5

Related Posts