ತಾಲೂಕು ಆಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ;ಅವಮಾನ ಸಹಿಸಿಯೂ ಮೂಕರಾದ ಇಲಾಖಾಧಿಕಾರಿಗಳು.

ತಾಲೂಕು ಆಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ;ಅವಮಾನ ಸಹಿಸಿಯೂ ಮೂಕರಾದ ಇಲಾಖಾಧಿಕಾರಿಗಳು.
Facebook
Twitter
LinkedIn
WhatsApp

ಬೆಳ್ತಂಗಡಿ: ದಯವಿಟ್ಟು ಯಾವುದೇ ಪೂರ್ವಾಗ್ರಹವಿಲ್ಲದೇ ಸ್ಥಿತಪ್ರಜ್ಞರಾಗಿ ಇಲ್ಲಿ ಪ್ರಕಟಿಸಲಾದ ಫೊಟೊವನ್ನೊಮ್ಮೆ ಗಮನವಿಟ್ಟು ನೋಡಿ. ಬೆಳ್ಳಿಯ ಸಿಂಹಾಸನದಲ್ಲಿ ಎತ್ತರದ ವೇದಿಕೆಯಲ್ಲಿ ಕಲ್ಮಂಜ ದೇವರಗುಡ್ಡೆಯ ಗುರುದೇವ ಮಠದ ಬ್ರಹ್ಮಾನಂದ ಶ್ರೀಗಳು ವಿರಾಜಮಾನರಾಗಿದ್ದಾರೆ. ಅವರ ಪದತಲದಲ್ಲಿ ವೇದಿಕೆಯ ಕೆಳಗೆ ಕುಳಿತವರು ಮಠದ ಭಕ್ತರು ಎಂದು ಊಹಿಸಿಕೊಂಡರೆ ಅದು ನಿಮ್ಮ ತಪ್ಪು. ಇವರೆಲ್ಲಾ ನಮ್ಮ ತಾಲೂಕಿನ ವಿವಿಧ ಇಲಾಖೆಯ ಕ್ಲಾಸ್ l ಅಧಿಕಾರಿಗಳು. ಪ್ರಾಯಶಃ ನಮ್ಮ ತಾಲೂಕಿನ ಇತಿಹಾಸದಲ್ಲಿ ಸರಕಾರಿ ಇಲಾಖಾಧಿಕಾರಿಗಳು ಈ ರೀತಿ ಗುಲಾಮರಂತೆ ಮೂಕ ವೇದನೆ ಅನುಭವಿಸಿ, ಹತಾಶರಾಗಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಇನ್ನೊಂದು ಉದಾಹರಣೆ ಸಿಗಲಾರದು. ಸರಕಾರಿ ವ್ಯವಸ್ಥೆಗೆ ಆದ ಈ ಅವಮಾನಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಆಗಸ್ಟ್ 21ರ ಶನಿವಾರ ಎಲ್ಲ ಸರಕಾರಿ ಇಲಾಖಾಧಿಕಾರಿಗಳ ಮೊಬೈಲ್ ಫೋನ್‌ನ ವಾಟ್ಸಾಪ್‌ಗೆ ತಾಲೂಕು ತಹಶೀಲ್ದಾರರ ಹೆಸರಲ್ಲಿ ತಾಲೂಕು ಕಛೇರಿಯಿಂದ ಮೆಸೇಜೊಂದು ರವಾನೆಯಾಗ್ತದೆ. ಆ ಮೆಸೇಜ್ ಇಂತಿದೆ. ‘ಎಲ್ಲ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳ ಗಮನಕ್ಕೆ, ಮಾನ್ಯ ಶಾಸಕರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಇವರ ಸೂಚನೆಯಂತೆ ದಿನಾಂಕ 23-08-2021ರಂದು ಅಪರಾಹ್ನ 12-00ಗಂಟೆಗೆ ಕನ್ಯಾಡಿ ಆಶ್ರಮದಲ್ಲಿ ಗುರು ನಾರಾಯಣ ಜಯಂತಿಗೆ ಹಾಜರಾಗಲು ಈ ಮೂಲಕ ಕೋರಲಾಗಿದೆ. -ತಹಶೀಲ್ದಾರರು ಬೆಳ್ತಂಗಡಿ’. ಇಲ್ಲಿ ಸರಕಾರಿ ಕರ್ತವ್ಯದಲ್ಲಿರುವ ಇಲಾಖಾಧಿಕಾರಿಗಳಿಗೆ ಕಛೇರಿ ವೇಳೆಯಲ್ಲಿ ಕೇಂದ್ರಸ್ಥಾನ ಬಿಟ್ಟು ಬರಲು ಶಾಸಕರ ಸೂಚನೆಯಂತೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರರು ಆದೇಶಿಸುತ್ತಾರೆ‌. ಹೇಳಿ ಕೇಳಿ ಶ್ರೀ ನಾರಾಯಣ ಗುರು ಜಯಂತಿ ಸರಕಾರಿ ಕಾರ್ಯಕ್ರಮ. ಈ ಸರಕಾರಿ ಕಾರ್ಯಕ್ರಮ ಖಾಸಗಿಯವರ ಮನೆಯಂಗಳದಲ್ಲಿ ಮಾಡಲು ಸರಕಾರದ ಮಾರ್ಗಸೂಚಿಯಲ್ಲಿ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಶಾಸಕ ಹರೀಶ್ ಪೂಂಜ ಮತ್ತು ತಹಶೀಲ್ದಾರ್ ಮಹೇಶ್ ಜೆ. ಉತ್ತರಿಸುವ ಮೂಲಕ ಸಾರ್ವಜನಿಕರ ಸಂದೇಹ ನಿವಾರಿಸಬೇಕು. ಆದರೂ ಈ ಆದೇಶ ಪಾಲಿಸಿದ ತಾಲೂಕಿನ ವಿವಿಧ ಸರಕಾರಿ ಇಲಾಖಾ ಅಧಿಕಾರಿಗಳು ಕಲ್ಮಂಜ ಗುರುದೇವ ಮಠಕ್ಕೆ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಾರೆ. ಬಹುಶಃ ಗುರುದೇವ ಮಠದಲ್ಲಿ ತಮ್ಮ ಸ್ಥಾನದ ಘನತೆಗೆ ಕುತ್ತು ಬರುತ್ತದೆ; ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ; ತಾವೆಲ್ಲಾ ಗುಲಾಮಗಿರಿಯನ್ನು ಒಪ್ಪಬೇಕಾಗಬಹುದು ಎಂಬ ಕಲ್ಪನೆಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುತೇಕ ಇಲಾಖಾ ಅಧಿಕಾರಿಗಳಿಗೆ ಇರಲಿಲ್ಲ.ಶಾಸಕರ ಸೂಚನೆ, ತಹಶೀಲ್ದಾರರ ಆದೇಶ ಪಾಲಿಸಲೇಬೇಕಾದ ಸಂದಿಗ್ಧತೆಯಲ್ಲೇ ಸರಕಾರಿ ಕಾರ್ಯಕ್ರಮವಾದ ಶ್ರೀ ನಾರಾಯಣ ಗುರು ಜಯಂತಿಗೆ ಗುರುದೇವ ಮಠಕ್ಕೆ ತೆರಳಿದ ಸರಕಾರಿ ಅಧಿಕಾರಿಗಳಿಗೆ ಆಘಾತ ಕಾದಿತ್ತು‌. ಅಲ್ಲಿ ಎತ್ತರದ ವೇದಿಕೆಯಲ್ಲಿ ಬೆಳ್ಳಿಯ ಸಿಂಹಾಸನದಲ್ಲಿ ಸರ್ವಸಂಘ ಪರಿತ್ಯಾಗಿಯಾದ ಮಠದ ಬ್ರಹ್ಮಾನಂದಶ್ರೀಗಳು ವಿರಾಜಮಾನರಾದರೆ, ಅವರ ಪದತಲದಲ್ಲಿ ಸರಕಾರಿ ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು‌. ಈ ದೃಶ್ಯ ಕಂಡ ದೇಶದ ಸಂವಿಧಾನವನ್ಬು ಗೌರವಿಸುವ ಯಾವನೇ ಪ್ರಜೆಗೆ ಹಿಂದಿನ ಪಾಳೆಯಗಾರಿಕೆ ಸಂಸ್ಕೃತಿ ನೆನಪಿಗೆ ಬಂದರೂ ಅಚ್ಚರಿ ಇಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ರಾಜ್ಯದ ಅನೇಕ ಶ್ರದ್ಧಾ ಕೇಂದ್ರಗಳಲ್ಲಿ ಸರಕಾರಿ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಕಂಡಿದ್ದೇವೆ. ಆದರೆ ಎಲ್ಲೂ ಯಾವತ್ತೂ ಸರಕಾರಿ ಅಧಿಕಾರಿಗಳನ್ನು ಈ ರೀತಿಯಾಗಿ ಗುಲಾಮರಂತೆ ಕಂಡದ್ದು ಇಲ್ಲ. ಶೋಷಿತರ ಧ್ವನಿಯಾಗಿ, ಗುಲಾಮಗಿರಿಯ ವಿರುದ್ಧ ಸಮರ ಸಾರಲು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯಿಂದ ಸ್ಥಾಪಿಸಲ್ಪಟ್ಟ ಗುರುದೇವ ಮಠದಲ್ಲೇ ಅದೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸರಕಾರಿ ಕಾರ್ಯಕ್ರಮದಲ್ಲಿಯೇ ಈ ರೀತಿ ಶೋಷಣೆಯ ದೃಶ್ಯ ಕಾಣಸಿಗಬಹುದು ಎಂಬ ಕಲ್ಪನೆಯೂ ಮಠದ ಸಾವಿರಾರು ನೈಜ ಭಕ್ತರಿಗೆ ಇದ್ದಿರಲಿಕ್ಕಿಲ್ಲ. ಕಾರ್ಯಾಂಗಕ್ಕೆ ಆದ ಅವಮಾನಕ್ಕೆ ಯಾರು ಹೊಣೆ?ಇನ್ನು ಪ್ರತಿನಿತ್ಯದಂತೆ ಮಠದಲ್ಲಿ ಸರಕಾರದ ಕೋವಿಡ್ ನಿಯಮ ಮೀರಿ ನೂರಾರು ಜನ ಸೇರಿದ್ದಾರೆ. ಕಾನೂನು-ನಿಯಮಬಾಹಿರವಾಗಿ ಇಲ್ಲಿ ನಡೆದ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸರಕಾರದ ಕಾನೂನು-ನಿಯಮಗಳನ್ನು ಪಾಲಿಸಿ-ರಕ್ಷಿಸಿ-ಅನುಷ್ಠಾನಿಸಬೇಕಾದ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಸಹಿತ ಹಾಜರಿದ್ದ ಬಹುತೇಕ ಇಲಾಖಾಧಿಕಾರಿಗಳು ಭಾಗವಹಿಸುತ್ತಾರೆ ಎಂದಾದರೆ; ಕಾರ್ಯಕ್ರಮಕ್ಕೆ ಜನ ಸೇರಬಾರದು, ಅನ್ನ ಸಂತರ್ಪಣೆ ನಡೆಸಬಾರದು ಮುಂತಾದ ಕಾನೂನು-ನಿಯಮಗಳು ಜನಸಾಮಾನ್ಯರು ತಮ್ಮ ಊರುಗಳಲ್ಲಿ ಆಚರಿಸುವ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶಾರದೋತ್ಸವ ಸಹಿತ ಸಾರ್ವಜನಿಕ ಉತ್ಸವಗಳಿಗೆ ಮಾತ್ರವಾ? ಎಂಬ ಪ್ರಶ್ನೆಗೆ ಉತ್ತರಿಸುವುದರ ಜೊತೆಗೆ; ಕಾನೂನು ಉಲ್ಲಂಘಿಸಿ ವ್ಯವಸ್ಥೆಗೇ ಸವಾಲು ಹಾಕಿದ ಸಂವಿಧಾನ ವಿರೋಧಿಗಳ ಮೇಲೆ ಕಾನೂನು ಕ್ರಮ ಜರಗಿಸುವ ಜವಾಬ್ದಾರಿ ಕಡಕ್ ಅಧಿಕಾರಿ ಎಂದು ಗುರುತಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಡಾl ರಾಜೇಂದ್ರರದ್ದು.

Latest 5

Related Posts