ಬೆಳ್ತಂಗಡಿ: ಪಾಕಪ್ರವೀಣರಿಗೂ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಒದಗಿಸಲಾಗುವ ಕಾರ್ಡ್ ನೀಡುವ ಸೌಲಭ್ಯವಿದೆ. ಅವರು ಅಕಸ್ಮಿಕವಾಗಿ ಮೃತರಾದರೆ ಅವರ ಕುಟುಂಬಕ್ಕೆ ತಿಂಗಳಿಗೆ ರೂಪಾಯಿ 7500/- ದೊರೆಯುವುದು. ಅಲ್ಲದೆ ಬ್ಯಾಂಕಿಗೆ ವರ್ಷಕ್ಕೆ ರೂಪಾಯಿ 12/-ರಂತೆ ಪ್ರೀಮಿಯಂ ಕಟ್ಟಿದರೆ ರೂಪಾಯಿ 2 ಲಕ್ಷದವರೆಗೆ ಪರಿಹಾರ ದೊರೆಯುವುದು. ಸದುದ್ದೇಶದಿಂದ ಪ್ರಾರಂಭಗೊಂಡ ಸಂಸ್ಥೆ ಪೂರ್ಣ ಫಲ ಕೊಡುತ್ತದೆ. ಸರಕಾರದ ವತಿಯಿಂದ ಎಲ್ಲ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ನುಡಿದರು. ಅವರು ಸೆಪ್ಟೆಂಬರ್ 3ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ವಿಪ್ರ ಪಾಕಶಾಸ್ತ್ರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯಾವುದೇ ಸಂಘಟನೆ ಯಶಸ್ವಿಯಾಗಲು ಸಂಘದ ಉದ್ದೇಶ ಸ್ಪಷ್ಟತೆಯಿರಬೇಕು. ನಿರಂತರತೆಗೆ ಸಾಮೂಹಿಕ ನಿರ್ಧಾರವಿರಬೇಕು. ನಿರ್ಣಯಕ್ಕೆ ಸದಸ್ಯರ ಬದ್ಧತೆಯಿರಬೇಕು, ಹಾಗೂ ಆರ್ಥಿಕ ಶುದ್ಧತೆಯಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ಣಾಯ ಮಾತನಾಡಿ, ಯಾವುದೇ ಶುಭ ಸಮಾರಂಭದಲ್ಲಿ ತೆರೆಯ ಮರೆಯಲ್ಲಿದ್ದು ಶುಚಿ ರುಚಿಯಾದ ಅಡುಗೆ ತಯಾರಿಸಿದರೆ, ಇಡೀ ಕಾರ್ಯಕ್ರಮ ಯಶಸ್ವಿಯಾದಂತೆ; ಸಾರ್ವಜನಿಕ ಸೇವೆಯಲ್ಲಿ ಸಂವಹನ ಸಂಸ್ಥೆಯಾಗಿ ಸಂಘಟನೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳನ್ನು ಮಾಡಿ ಬೆಳೆಯಲಿ ಎಂದು ಶುಭ ಹಾರೈಸಿದರು. ವೀರೇಶ್ವರ ಭಟ್ ಗಂಗೆನೀರು ಅವರು ಪ್ರಸ್ತಾವಿಸಿ ಸಂಘಶಕ್ತಿಗೆ ಮಹಾಶಕ್ತಿಯಿದೆ. ಕಾರ್ಯಕ್ರಮದ ಯಶಸ್ಸು ಧಾರ್ಮಿಕ ಕಾರ್ಯಕ್ರಮ ಹಾಗೂ ಊಟ(ಅಡುಗೆ)ವನ್ನು ಅವಲಂಬಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಅದ ಗೌರವವಿದೆ. ಕಾರ್ಯಕ್ರಮ ಸಫಲವಾಗಲು ಯೋಜನೆ ಅಗತ್ಯ. ಒಗ್ಗಟ್ಟು ಸಂಘದ ಮೂಲ ಉದ್ದೇಶ ವಾಗಿರಬೇಕು ಎಂದು ನುಡಿದರು.ಮುಖ್ಯ ಅತಿಥಿಗಳಾಗಿ ಕರಾಡ ಬ್ರಾಹ್ಮಣ ಸಂಘದ ಮುರಳೀಧರ ಬಲಿಪ, ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಹವ್ಯಕ ಬ್ರಾಹ್ಮಣ ಸಂಘದ ಮಹೇಶ ಭಟ್, ಚಿತ್ಪಾವನ ಬ್ರಾಹ್ಮಣ ಸಂಘದ ಪ್ರತಿನಿಧಿ ತ್ರಿವಿಕ್ರಮ ಹೆಬ್ಬಾರ್, ಕೂಟ ಮಹಾಜಗತ್ತು ತಾಲೂಕು ಘಟಕದ ವಾಸುದೇವ ಸೋಮಯಾಜಿ, ಸ್ಥಾನಿಕ ಬ್ರಾಹ್ಮಣ ಸಭಾಧ್ಯಕ್ಷ ರಾಧಾಕೃಷ್ಣ ರಾವ್ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಮಂಡಿಸಿ ಸಂಘಟನೆಗೆ ಶುಭ ಕೋರಿದರು. ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ಹಿರಿಯ ಪಾಕ ಪ್ರವೀಣರಾದ ವೆಂಕಟ್ರಮಣ ಭಟ್ ಹಿತ್ತಲಕೋಡಿ, ವೆಂಕಟ್ರಮಣ ಭಟ್ ಸವಣಾಲು, ವಿಷ್ಣು ಖಾಡಿಲ್ಕರ್ ಅರಸಿನಮಕ್ಕಿ, ಮುರಳೀಧರ ಭಟ್ ಮುಂಡಾಜೆ, ಸುಬ್ರಾಯ ಭಟ್ ಸುಲ್ಕೇರಿ ಮತ್ತು ಶೇಷಪ್ಪಯ್ಯ ಹೊಳ್ಳ ಸವಣಾಲು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಖಜಾಂಚಿ ಹರಿಪ್ರಸಾದ್ ಭಟ್ ಹಿತ್ತಲಕೋಡಿ ಸಂಘದ ಪದಾಧಿಕಾರಿಗಳ ವಿವರ ಮಂಡಿಸಿದರು. ಸಂಘದ ಅಧ್ಯಕ್ಷರಾಗಿ ಮುಕುಂದ ದೇವಧರ್, ಕಾರ್ಯದರ್ಶಿಯಾಗಿ ಬಾಲಕೃಷ್ಣ ಸಹಸ್ರಬುದ್ಧೆ ಅಧಿಕಾರ ಸ್ವೀಕರಿಸಿದರು. ಪದಾಧಿಕಾರಿಗಳಾದ ಪಾಂಡುರಂಗ ಕಾಕತ್ಕರ್, ರಾಘವೇಂದ್ರ ರಾವ್, ಸುರೇಶ ಹೊಳ್ಳ, ಕೃಷ್ಣಕುಮಾರ್, ಸುಬ್ರಹ್ಮಣ್ಯ ಬೈಪಾಡಿತ್ತಾಯ ಮೊದಲಾದವರು ಸಹಕರಿಸಿದರು. ಶೈಲೇಶ್ ಠೋಸರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಾಲಕೃಷ್ಣ ಸಹಸ್ರಬುದ್ಧೆ ಸ್ವಾಗತಿಸಿ, ಅಧ್ಯಕ್ಷ ಮುಕುಂದ ದೇವಧರ್ ಸಂಘದ ಬೆಳವಣಿಗೆಯಲ್ಲಿ ಎಲ್ಲರ ಸಹಕಾರ ಕೋರಿ ಕೊನೆಯಲ್ಲಿ ವಂದಿಸಿದರು.






