ಬೆಳ್ತಂಗಡಿ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಹಾಗೂ ಡಿಸೇಲ್ ಸೇರಿದಂತೆ ಅಡುಗೆ ಅನಿಲಗಳ ಬೆಲೆ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದೇಶದ ಬಡಜನರ ಮೇಲೆ ಸವಾರಿ ಮಾಡುವ ನೀಚ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಆರೋಪಿಸಿದರು.
ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 11ರಂದು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು .
ಕೋವಿಡ್-19 ನಿಂದ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗಿದೆ. ದೇಶದ ಅತ್ಯಂತ ಸಂಕಷ್ಟದ ಸ್ಥಿತಿಯನ್ನು ತಲುಪಿರುವ ಸಂದರ್ಭದಲ್ಲಿ ಜನರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ನಿತ್ಯೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಅಚ್ಚೇದಿನ್ ಕೇವಲ ಅದಾನಿ , ಅಂಬಾನಿ ಸೇರಿದಂತೆ ದೇಶದ ಬಂಡವಾಳಿಗರ ಮನೆಗೆ ಬಂದಿದೆಯೇ ಹೊರತು ಬಡವರು, ಮಧ್ಯಮ ವರ್ಗದ ಜನರ ಮನೆಗೆ ಬಂದಿಲ್ಲ ಎಂದ ಅವರು ಬಿಜೆಪಿ ಸರ್ಕಾರಗಳು ಕೇವಲ ಶ್ರೀಮಂತರ ಗುಲಾಮರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿರುವುದು ನಮ್ಮ ದೇಶದಲ್ಲಿ ಮಾತ್ರ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಜನರ ಪರಿಸ್ಥಿತಿ ಅತ್ಯಂತ ದುಸ್ಥರಗೊಂಡಿದೆ. ಉದ್ಯೋಗ ಕೇಳಿದಾಗ ಪಕೋಡ ಮಾರಲು ಹೇಳಿದ ಪ್ರಧಾನಿ ಮೋದಿ, ಇಂದು ಅಡುಗೆ ಎಣ್ಣೆ ಹಾಗೂ ಬೇಳೆಕಾಳುಗಳ ಬೆಲೆಯನ್ನೂ ಏರಿಕೆ ಮಾಡುವ ಮೂಲಕ ಪಕೋಡ ಮಾರಲು ಅಸಾಧ್ಯವಾಗದಂತೆ ಮಾಡಿದ್ದಾರೆ ಎಂದ ಅವರು ಬಿಜೆಪಿ ಸರ್ಕಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಸಿಪಿಐ(ಎಂ) ಪಕ್ಷದ ಹೋರಾಟವನ್ನು ಹತ್ತಿಕ್ಕಲು ತ್ರಿಪುರದಲ್ಲಿ ಪಕ್ಷದ ಕಛೇರಿಗಳಿಗೆ ಬೆಂಕಿ ಹಚ್ಚುವ ನೀಚತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರಲ್ಲದೇ ಕಛೇರಿಗಳಿಗೆ ಬೆಂಕಿ ಹಚ್ಚುವ ಮೂಲಕ ಕಮ್ಯೂನಿಸ್ಟರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ತ್ರಿಪುರದಲ್ಲಿ ಬಿಜೆಪಿಗರ ಪುಂಡಾಟ ತಾಲಿಬಾನ್ಗಳ ಪುಂಡಾಟದಂತಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಮುಖಂಡರಾದ ಶೇಖರ್ ಎಲ್, ಗುರುಪುರ ವಲಯ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ಮನೋಜ್ ವಾಮಂಜೂರು, ಮುಖಂಡರಾದ ಸುಕನ್ಯಾ ಹೆಚ್, ಸುಜೀತ್ ಉಜಿರೆ, ಸಂಜೀವ ಆರ್, ಸುಧಾ ಕೆ ರಾವ್, ಕುಸುಮ ಮಾಚಾರ್, ಪದ್ಮಾವತಿ, ಜಿಜೋ ಗರ್ಡಾಡಿ, ಜಯನ್ ಮುಂಡಾಜೆ, ದಿನೇಶ್ ಓಡಿಲ್ನಾಳ ವಹಿಸಿದ್ದರು.






