ಬೆಳ್ತಂಗಡಿ: ಬೆಳಕು ಸೇವಾತಂಡ ಬೆಳ್ತಂಗಡಿ ಇದರ ಎರಡನೇ ವಾರ್ಷಿಕ ಮಹಾಸಭೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಮಡಂತ್ಯಾರು ಗ್ರಾಮ ಪಂಚಾಯತಿನ ಸಭಾಭವನದಲ್ಲಿ ಆಗಸ್ಟ್13ರಂದು ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಮನೋಹರ ಬಳೆಂಜ ಮಾತನಾಡಿ, ದಾನಮಾಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವನೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವಂತಾಗಬೇಕು. ಈ ರೀತಿಯ ಚಿಂತನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಆಗ ಸಮಾಜದಲ್ಲಿ ಇರುವಂತಹ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳಕು ಸೇವಾ ತಂಡದ ಅಧ್ಯಕ್ಷ ಧರಣೇಂದ್ರ ಕೆ. ಮಾತನಾಡಿ, ಸಣ್ಣ ಮಟ್ಟದಲ್ಲಿ ಆರಂಭಗೊಂಡ ಬೆಳಕು ತಂಡ ಇದೀಗ 250 ಮಂದಿ ಸದಸ್ಯರಿದ್ದುಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಸ್ಧಾಪನೆಯಾದ ತಂಡದ ಮೂಲಕ ತಾಲೂಕಿನಲ್ಲಿ ಹಾಗೂ ಹೊರಗೆ ಹಲವಾರು ಸೇವಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಘದಲ್ಲಿ ಈವರೆಗೆ5,22,000ರೂಪಾಯಿ ಸಂಗ್ರಹವಾಗಿದೆ. ಇದನ್ನು 54 ಮಂದಿ ಫಲಾನುಭಾವಿಗಳಿಗೆ ವಿತರಣೆ ಮಾಡಲಾಗಿದೆ. ಪ್ರತಿ ಹಂತದಲ್ಲಿಯೂ ಕೂಡ ಸಮಸ್ಯೆ ಇರುವ ಅರ್ಹ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲಾಗುತ್ತಿದೆ.ಬೆಳಕು ಖಾತೆಯಲ್ಲಿ ಪ್ರತಿ ತಿಂಗಳು ಅಂತಿಮ ಶಿಲ್ಕು 0 ಇರುತ್ತದೆ ಎಂದು ವಿವರಿಸಿದರು.ಕಾರ್ಯದರ್ಶಿ ರಘುಪತಿ ಕೆ. ರಾವ್ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಮಡಂತ್ಯಾರು ಗ್ರಾಮಪಂಚಾಯತು ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಸಂಘದ ಗೌರವ ಅಧ್ಯಕ್ಷ ಪದ್ಮಪ್ರಕಾಶ್, ಕೋಶಾಧಿಕಾರಿ ಸೀತಾರಾಮ ಹಾಗೂ ಇತರರು ಇದ್ದರು.ಎಂಟು ಮಂದಿ ಫಲಾನುಭಾವಿಗಳಿಗೆ ಸಾಂತ್ವನ ನಿಧಿಯನ್ನು ವಿತರಿಸಲಾಯಿತು.






