ಮೂಡುಬಿದಿರೆ: ಮಂದಿರ, ಮಸೀದಿ, ಚರ್ಚ್ ಮತ್ತು ದೈವಸ್ಥಾನಗಳು ಸಮಾನತೆಯ ಹಾಗೂ ಸರ್ವಧರ್ಮ ಸಮಭಾವದ ಸಂಕೇತವೆಂದು ಕಾಂಗ್ರೆಸ್ ಪಕ್ಷವು ಭಾವಿಸಿದ್ದು; ಇಂತಹ ಆರಾಧನಾ ಕೇಂದ್ರಗಳಿಗೆ ಧಕ್ಕೆ ತರುವ ಕೆಲಸ ಬಿಜೆಪಿ ಸರಕಾರದಿಂದ ನಡೆದರೆ ಅದರ ವಿರುದ್ಧ ಕಾಂಗ್ರೆಸ್ ಪಕ್ಷ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮರೋಳಿ ನುಡಿದರು. ಧಾರ್ಮಿಕ ಕೇಂದ್ರಗಳನ್ನು ಕೆಡವಿದ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 25ರ ರಾತ್ರಿ ನಡೆದ ಬೃಹತ್ ಕಾಲ್ನಡಿಗೆ ಜಾಥಾದ ಕೊನೆಗೆ ಸಮಾವೇಶಗೊಂಡ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಗರದ್ದು ಬೆಂಕಿ ಕೊಡುವ ಸಂಸ್ಕೃತಿಯಾದರೆ ಕಾಂಗ್ರೆಸ್‌ನದ್ದು ದೀಪಹಚ್ಚುವ ಸಂಸ್ಕೃತಿಯಾಗಿದೆ. ಧ್ವಂಸ ಮಾಡುವುದು ಬಿಜೆಪಿ ಸಂಸ್ಕೃತಿಯಾದರೆ ರಕ್ಷಿಸುವುದು ನಮ್ಮ ಸಂಸ್ಕೃತಿ, ಬಿಜೆಪಿಯದ್ದು ಹಲ್ಲೆ ಮಾಡುವ ಸಂಸ್ಕೃತಿಯಾದರೆ ನಮ್ಮದು ಕೈತುತ್ತು ನೀಡುವ ಸಂಸ್ಕೃತಿಯಾಗಿದೆ. ಬಸವಣ್ಣನವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಮಹಾವೀರನ ಅಹಿಂಸಾ ತತ್ವ, ಬುದ್ಧನ ಕಾರುಣ್ಯವನ್ನು ಕಾಂಗ್ರೆಸ್ ಒಪ್ಪಿಕೊಂಡು ನಡೆದರೆ ರಕ್ತಪಿಪಾಸು ಬಿಜೆಪಿಗರು ರಕ್ತಾಸುರ ಗೋಡ್ಸೆಯ ತತ್ವವನ್ನು ಒಪ್ಪಿಕೊಂಡಿದೆ. ರೈತರ ಜೊತೆಗೆ, ಕಾರ್ಮಿಕರ ಜೊತೆಗೆ ಮಾತನಾಡಲು ಸಿದ್ಧರಿಲ್ಲದ ಬಿಜೆಪಿ ಸರಕಾರ ತಾಲಿಬಾನಿಗಳ ಜೊತೆಗೆ ಮಾತನಾಡಲು ಮುಂದಾಗಿದೆ. ಹೇಗೆ ತಾಲಿಬಾನ್ ಎಂಬುದು ಮುಸಲ್ಮಾನನಲ್ಲವೋ ಅದೇ ರೀತಿ ಬಿಜೆಪಿ ಎಂಬುದು ಹಿಂದುವೂ ಅಲ್ಲ, ಅದು ಹಿಂದು ಧರ್ಮವೂ ಅಲ್ಲ ಎಂದು ನುಡಿದ ಅವರು ಬಿಜೆಪಿ ಸ್ಟಿಕ್ಕರ್ ಅಂಟಿಸಿ ಪುಕ್ಕಟೆ ಪ್ರಚಾರ ನೀಡಿದ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಅಂಗಡಿ ಮಾಲಕರಿಗೆ ಬಿಜೆಪಿ ಸರಕಾರ ಇಂಧನ ಸಹಿತ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಕೊಡುಗೆ ನೀಡಿದೆ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಲೇರಿಯನ್ ಸಿಕ್ವೇರಾ, ಮೋಹನ ಕೋಟ್ಯಾನ್ ಮೂಲ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ , ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಕಡಲಕೆರೆ ನಿರೂಪಿಸಿದರು.






