ಬೆಳ್ತಂಗಡಿ: ಅಕ್ಟೋಬರ್ ತಿಂಗಳ 1 ಮತ್ತು2ನೇ ತಾರೀಕಿನಂದು ರಾತ್ರಿ ಕಾಡಾನೆಗಳು ಕಡಿರುದ್ಯಾವರ ಹಾಗೂ ಚಾರ್ಮಾಡಿ ಭಾಗಗಳ ಕೃಷಿ ಪ್ರದೇಶಕ್ಕೆ ದಾಳಿ ನಡೆಸಿ ಹಾನಿ ಉಂಟು ಮಾಡಿವೆ.ಈ ಎರಡು ರಾತ್ರಿಗಳಲ್ಲಿ ಈ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದು ಆನೆಗಳ ದಾಳಿ ತಡವಾಗಿ ಬೆಳಕಿಗೆ ಬಂದಿದೆ.ಕಡಿರುದ್ಯಾವರ ಗ್ರಾಮದ ಶೆಟ್ಟಿ ಪಾಲು ಸಮೀಪ ಕ್ಸೇವಿಯರ್ ಅವರ ತೋಟದಲ್ಲಿ 100ಕ್ಕೂ ಅಧಿಕ ಅಡಕೆ ಮರ, ಬಾಳೆಗಿಡ ಕಾಡಾನೆ ದಾಳಿಗೆ ತುತ್ತಾಗಿವೆ. ಇಲ್ಲಿನ ಹಾನಿ ಪ್ರಮಾಣ ಅಂದಾಜಿಸುವಾಗ ಒಂದಕ್ಕಿಂತ ಅಧಿಕ ಕಾಡಾನೆಗಳು ದಾಳಿ ನಡೆಸಿರುವ ಸಾಧ್ಯತೆ ಕಂಡು ಬರುತ್ತಿದೆ.ಅಕ್ಟೋಬರ್ 1ರ ರಾತ್ರಿ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮಠ ಪ್ರದೇಶದಲ್ಲಿ ಚಂದ್ರ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.ಮುಂಡಾಜೆ, ಕಲ್ಮಂಜ ಗ್ರಾಮಗಳ ಪರಿಸರದಲ್ಲಿ ಸುಮಾರು ಹತ್ತು ದಿನಗಳ ಕಾಲ ಭೀತಿ ಎಬ್ಬಿಸಿದ್ದ ಕಾಡಾನೆ, ಸೆಪ್ಟೆಂಬರ್ 30ರ ಹಗಲು ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಹಾಗೂ ಮನೆಗಳ ವ್ಯಾಪ್ತಿಯಲ್ಲಿ ಸಂಚಾರ ನಡೆಸಿತ್ತು.ಇದೀಗ ಸಮೀಪದ ಕಡಿರುದ್ಯಾವರ ಹಾಗೂ ಚಾರ್ಮಾಡಿಯಲ್ಲಿ ಕೂಡ ದಾಂಧಲೆ ಕಂಡುಬಂದಿದೆ. ಮುಂಡಾಜೆ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ಆನೆಗಳ ಬರುವಿಕೆ ತಡೆಗಟ್ಟಲು ರಾತ್ರಿ ಗಸ್ತು ಕೈಗೊಂಡಿದ್ದಾರೆ. ಈ ಪ್ರದೇಶಗಳಲ್ಲಿ ನುಸುಳದ ಆನೆಗಳು ಇನ್ನೊಂದು ಕಡೆಯಿಂದ ಲಗ್ಗೆ ಇಡುತ್ತಿರುವುದು ಕೃಷಿಕರ ಚಿಂತೆಯನ್ನು ಹೆಚ್ಚಿಸಿದೆ.






