ಬೆಳ್ತಂಗಡಿ: ಯುವವಾಹಿನಿ ಮೂಡುಬಿದಿರೆ ಘಟಕ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದ್ರೆಯ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಅಕ್ಟೋಬರ್ 10ರಂದು ‘ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮನ್ವಯತೆ’ ಎಂಬ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಾರಾಯಣ ಗುರುಗಳು ಕೇರಳದಲ್ಲಿ ಉದಿಸಿದ ಮಹಾನ್ ದಾರ್ಶನಿಕ, ಸಾಮಾಜಿಕ ಅನಿಷ್ಠಗಳ ನಿವಾರಣೆಗೆ ಶ್ರಮಿಸಿದವರು. ನಾರಾಯಣ ಗುರು ಮತ್ತು ಗಾಂಧಿ ಚಿಂತನೆಗಳು ಪ್ರಸ್ತುತ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂಡುಬಿದಿರೆಯ ಹಿರಿಯ ವಕೀಲ ಬಾಹುಬಲಿ ಪ್ರಸಾದ್ ಮಾತನಾಡಿ, ನಾರಾಯಣ ಗುರುಗಳ ಸುಧಾರಣೆಗಳ ಮೂಲಕ ಇಂದು ಹಿಂದೂ ಧರ್ಮ ಉಳಿದಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾl ರಾಜಾರಾಮ ಮಾತನಾಡಿ, ನಾರಾಯಣ ಗುರುಗಳದ್ದು ಸಂಘರ್ಷದ ದಾರಿಯಲ್ಲ. ಶಾಂತಿಯ ಮೂಲಕವೇ ಮೌನಕ್ರಾಂತಿ ಮಾಡಿದವರು. ಗುರುಗಳ ಚಿಂತನೆ ಮತ್ತು ಗಾಂಧಿ ಚಿಂತನೆಗಳು ಪರಸ್ಪರ ಪೂರಕ ಎಂದರು. ಉಪನ್ಯಾಸ ನೀಡಿದ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ಧಾರ್ಮಿಕತೆಯ ಮೂಲಕವೇ ಸುಧಾರಣೆಗೆ ನಾಂದಿ ಹಾಡಿದವರು ನಾರಾಯಣ ಗುರುಗಳು. ನಾರಾಯಣ ಗುರು ಹಾಗೂ ಗಾಂಧಿ ಭೇಟಿಯ ಸಂದರ್ಭದ ಮಾತುಕತೆಗಳು ಅಮೂಲ್ಯ ಚಿಂತನೆಗಳಾಗಿವೆ. ಇವರಿಬ್ಬರು ಸಮಾಜದ ಎಲ್ಲಾ ವರ್ಗಗಳನ್ನೂ ತಟ್ಟಿದ ದಾರ್ಶನಿಕರು ಎಂದರು. ಯುವವಾಹಿನಿ ಮೂಡುಬಿದ್ರೆ ಘಟಕದ ಅಧ್ಯಕ್ಷ ಹರಿಪ್ರಸಾದ್ ಪಿ. ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಸಮಿತಿಯ ನಿರ್ದೇಶಕ ಜಗದೀಶ್ಚಂದ್ರ ಡಿ. ಕೆ., ಮೂಡುಬಿದ್ರೆ ಘಟಕದ ಸೌಮ್ಯ ಕೋಟ್ಯಾನ್ ಉಪಸ್ಥಿತರಿದ್ದರು. ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಹನಿ ಅಮೀನ್ ಪ್ರಾರ್ಥಿಸಿದರು, ಪ್ರಭಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿದರು






