ಬೆಳ್ತಂಗಡಿ: ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಲು ಹಿರಿಯರ ಮಾರ್ಗದರ್ಶನ ಹಾಗೂ ಸ್ವಯಂಸೇವಕರ ಬೆಂಬಲ ಅತಿ ಮುಖ್ಯ, ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಂಚಿ ಕೆಲಸ ನಿರ್ವಹಿಸಿದರೆ ಯಾವುದೇ ಒತ್ತಡ ಇರುವುದಿಲ್ಲ. ಕಾರ್ಯಕ್ರಮಕ್ಕೆ ಮುಂಚಿತವಾಗಿ ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದರೆ ಯಶಸ್ಸು ನಿಶ್ಚಿತ. ಉಜಿರೆಯ ಅಧಿವೇಶನ ಶಾಶ್ವತವಾಗಿ ಎಲ್ಲರ ನೆನಪಿನಲ್ಲಿ ಉಳಿಯುವಂತಾಗಲಿ ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜನವರಿ ತಿಂಗಳಲ್ಲಿ ಉಜಿರೆಯಲ್ಲಿ ನಡೆಯಲಿರುವ ಮೂರನೇ ರಾಜ್ಯ ಅಧಿವೇಶನಕ್ಕೆ ಸಂಬಂಧಪಟ್ಟ ಕಾರ್ಯಾಲಯವನ್ನು ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಅಕ್ಟೋಬರ್ 14ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ಣಾಯ ಅಧಿವೇಶನದ ಪ್ರತಿನಿಧಿ ನೋಂದಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಈಗಾಗಲೇ ಎಲ್ಲರ ಸಹಕಾರದಿಂದ ಉಜಿರೆಯಲ್ಲಿ ಕಾರ್ಯಕರ್ತರ ದುಡಿಮೆಯಿಂದ ಹ ಲವು ಯಶಸ್ವೀ ಸಮ್ಮೇಳನಗಳನ್ನು ನಡೆಸಿದ್ದು, ಈ ಅಧಿವೇಶನವನ್ನೂ ಎಲ್ಲರ ಸಹಕಾರದಿಂದ ಉತ್ತಮ ಮಟ್ಟದ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಸಂಘಟಿಸಲು ಸಾಧ್ಯ ಎಂದರು.ಪರಿಷದ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಗಂಟೆ ಹೊಳೆ ಪ್ರಸ್ತಾವಿಕವಾಗಿ ಮಾತನಾಡಿ, ವಿಚಾರವನ್ನು ಪ್ರತಿಪಾದಿಸುವ ಅನೇಕ ಸಂಘಟನೆಗಳಿವೆ. ಆದರೆ ಅಖಿಲ ಭಾರತ ಸಾಹಿತ್ಯ ಪರಿಷದ್ ವೈಚಾರಿಕತೆ ಮತ್ತು ಬದ್ಧತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ವಿಧಾನ ಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್, ಪರಿಷದ್ನ ರಾಜ್ಯ ಕಾರ್ಯದರ್ಶಿ ರಘುನಂದನ ಭಟ್, ಸಂಚಾಲಕ ಡಾ. ಮಾಧವ ಎಂ. ಕೆ., ಅತ್ತಾಜೆ ಕೇಶವ ಭಟ್ ಮತ್ತಿತರರು ಉಪಸ್ಥಿತರಿದ್ದರು.ತಾಲೂಕು ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ನಾರಾಯಣ ರಾವ್ ವಂದಿಸಿದರು.






