ರಾಜ್ಯೋತ್ಸವ ಆಚರಣೆ ಶಿಷ್ಟಾಚಾರಕ್ಕೆ ಸವಾಲ್ : ಹಸಿದ ಮಕ್ಕಳು ಬರಿಹೊಟ್ಟೆಯಲ್ಲಿ ಮನೆಗೆ

ರಾಜ್ಯೋತ್ಸವ ಆಚರಣೆ ಶಿಷ್ಟಾಚಾರಕ್ಕೆ ಸವಾಲ್ : ಹಸಿದ ಮಕ್ಕಳು ಬರಿಹೊಟ್ಟೆಯಲ್ಲಿ ಮನೆಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಡಳಿತದ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನವೆಂಬರ್ 1ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಆವರಣದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವವು ಸಾಕಷ್ಟು ಎಡವಟ್ಟುಗಳಿಗೆ ಸಾಕ್ಷಿಯಾಯಿತು.
ರಾಜ್ಯದೆಲ್ಲೆಡೆ ಶಿಷ್ಟಾಚಾರದಂತೆ ಬೆಳಿಗ್ಗೆ ಗಂಟೆ 9-00ರಿಂದ 9-30ರೊಳಗೆ ಧ್ವಜಾರೋಹಣವಾದರೆ; ಬೆಳ್ತಂಗಡಿಯಲ್ಲಿ ಮಾತ್ರ ಗಂಟೆ 10-00 ಆದರೂ ಧ್ವಜಾರೋಹಣಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಈ ರೀತಿ ಶಿಷ್ಟಾಚಾರ ಉಲ್ಲಂಘನೆಗೆ ಕಾರಣ ಎಲ್ಲರಿಗೂ ಗೊತ್ತಿತ್ತು. ಆದರೆ ಅಭಿಪ್ರಾಯಿಸುವ ‘ದಂ’ ಯಾರಿಗೂ ಇದ್ದಂತಿರಲಿಲ್ಲ. ಶಾಸಕ ಹರೀಶ್ ಪೂಂಜರಿಗೆ ಬಕೆಟ್ ಹಿಡಿಯುವುದೇ ತನ್ನ ಮೊದಲ ಕಾಯಕ ಎಂದು ಭಾವಿಸಿದಂತಿರುವ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಜೆ‌. ಮಹೇಶ್, ರಾಜ್ಯೋತ್ಸವ ಆಚರಣೆಯಲ್ಲಿ ನಿಗದಿತ ಸಮಯಕ್ಕೆ ಧ್ವಜಾರೋಹಣ ನಡೆಸದೇ ಶಿಷ್ಟಾಚಾರವನ್ನು ಬದಿಗಿರಿಸಿ, ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜರ ಬರುವಿಕೆಗಾಗಿ ಕಾಯುತ್ತಿದ್ದರು. ಕೊನೆಗೂ ಶಾಸಕ ಹರೀಶ್ ಪೂಂಜರ ಅನುಮತಿ ಪಡೆದು ಅವರ ಅನುಪಸ್ಥಿತಿಯಲ್ಲಿಯೇ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣದ ಮೂಲಕ ತಹಶೀಲ್ದಾರ್ ಮಹೇಶ್ ಜೆ. ಚಾಲನೆ ನೀಡಿದರು. ಈ ರೀತಿಯಾಗಿ ಶಾಸಕ ಹರೀಶ್ ಪೂಂಜರಿಗೆ ಕಾದು ಶಿಷ್ಟಾಚಾರ ಉಲ್ಲಂಘನೆಯಾಗಿ ಆರಂಭಗೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸರು, ಹೋಂಗಾರ್ಡ್ಸ್ ಹಾಗೂ ವೇಣೂರು ಐಟಿಐಯ ವಿದ್ಯಾರ್ಥಿಗಳು ಧ್ವಜಾರೋಹಣದ ಬಳಿಕ ಗಾರ್ಡ್ ಆಫ್ ಆನರ್ (ಧ್ವಜವಂದನೆ) ಕಾರ್ಯಕ್ರಮದಲ್ಲಿ ಭಾಗವಹಿಸದೇ, ತೆರಳುವ ಮೂಲಕ ತಾವೂ ಶಿಷ್ಟಾಚಾರ ಪಾಲನೆ ವಿಚಾರದಲ್ಲಿ ತಹಶೀಲ್ದಾರ್ ಮಹೇಜ್ ಜೆ.ಯವರ ಹಾದಿಯನ್ನೇ ಅನುಸರಿಸಿದರು.
ಕಾರ್ಯಕ್ರಮ ಆರಂಭವಾಗಿ ಧ್ವಜಾರೋಹಣವಾದ ಬಳಿಕ ವಿದ್ಯಾರ್ಥಿಗಳಿಂದ ನಾಲ್ಕಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತದನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ, ಮಧ್ಯದಲ್ಲಿ ಧ್ವನಿವರ್ದಕದ ಮೂಲಕ ಪ್ರಕಟಣೆ ಹೊರಡಿಸಿದ ಕಾರ್ಯಕ್ರಮ ನಿರೂಪಕರು ‘ಮಕ್ಕಳು ಯಾರೂ ಹೋಗಬಾರದು, ಕಾರ್ಯಕ್ರಮದ ಕೊನೆಯತನಕ ನಿಲ್ಲಬೇಕು’ ಎಂದು ಮೌಖಿಕ ಆದೇಶ ಹೊರಡಿಸುವ ತಾವೂ ಶಿಷ್ಟಾಚಾರ ಉಲ್ಲಂಘಿಸಿ, ತಹಶೀಲ್ದಾರ್ ಮಹೇಶ್ ಜೆ.ಯವರಿಗೆ ಬೆಂಬಲ ಸೂಚಿಸಿದರು.
ಇವೆಲ್ಲದರ ಜೊತೆಗೆ ರಾಜ್ಯೋತ್ಸವಕ್ಕೆಂದು ಬೆಳಿಗ್ಗೆ ಬೇಗನೆ ಮನೆಯಿಂದ ಹೊರಟು ಬಂದಿರುವ ವಿವಿಧ ಶಾಲೆಯ ಮಕ್ಕಳಿಗೆ ಉತ್ಸವದ ಪ್ರಯುಕ್ತ ನೀಡಬೇಕಾದ ಸಿಹಿತಿಂಡಿಯನ್ನೂ ನೀಡದೇ, ಅಧಿಕಾರಿಗಳು ತಾವು ಮಾತ್ರ ಮಿನಿ ವಿಧಾನಸೌಧದ ಒಳಗೆ ತಿಂಡಿ ಸೇವಿಸಿ ತೇಗಿದ್ದು ಮಾನವೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಸರಕಾರ ರಾಜ್ಯೋತ್ಸವಕ್ಕೆ ನೀಡುವ ಅನುದಾನದ ಸದ್ಬಳಕೆಯಾಗದಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

Latest 5

Related Posts