ಬೆಳ್ತಂಗಡಿ: 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಿದ ಮರುದಿನವೇ ಅಂದರೆ ನವೆಂಬರ್ 2ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ರಾಜ್ಯದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ರ ಉಪಸ್ಥಿತಿಯಲ್ಲಿಯೇ ನಾಡಗೀತೆಗೆ ಅವಮಾನಿಸಿದ ಪ್ರಸಂಗ ನಡೆಯಿತು. ತನಗಾದ ಅವಮಾನಕ್ಕೆ ಕನ್ನಡತಾಯಿ ಭುವನೇಶ್ವರಿ ಸುರಿಸಿದ ಕಣ್ಣೀರು ಮಾತ್ರ ಅರಣ್ಯರೋದನವಾಗಿತ್ತು.ಬೆಳ್ತಂಗಡಿ ತಾಲೂಕಿನ 55 ಸರಕಾರಿ ಶಾಲೆಗಳಿಗೆ ಎಂಆರ್‌ಪಿಎಲ್ ಕಂಪೆನಿಯವರು ತಮ್ಮ ಸಿಎಸ್‌ಆರ್ ಫಂಡ್ ಮೂಲಕ ಒದಗಿಸಿದ ಹೈಟೆಕ್ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಉಜಿರೆಯ ಬದನಾಜೆ ಸರಕಾರಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿ, ಅಲ್ಲಿನ ಶಿಕ್ಷಕರ ಮಾರ್ಗದರ್ಶನದಂತೆ ಅರ್ಧ ನಾಡಗೀತೆ ಹಾಡಿ ನಾಡಗೀತೆಯನ್ನು ಅವಮಾನಿಸಿದರು. ನಾಡಗೀತೆಯ ಮೊದಲ ಮತ್ತು ಕೊನೆಯ ಚರಣಗಳನ್ನು ಮಾತ್ರ ಹಾಡಿದ ವಿದ್ಯಾರ್ಥಿನಿಯರು ಮಧ್ಯದ ಚರಣಗಳನ್ನು ಬಿಟ್ಟಿದ್ದರು. ಈ ರೀತಿಯಾಗಿ ನಾಡಗೀತೆಯನ್ನು ಅರೆಬರೆ ಹಾಡಿಸಲು ಅಲ್ಲಿನ ಶಿಕ್ಷಕರಿಗೆ ಅನುಮತಿ ನೀಡಿದವರು ಯಾರು ಎಂದು ಪತ್ತೆಹಚ್ಚಬೇಕಾಗಿದೆ. ಈ ರೀತಿಯಾಗಿ ಮಕ್ಕಳು ನಾಡಗೀತೆಯನ್ನು ಅವಮಾನಿಸುತ್ತಿದ್ದರೂ ಅದಕ್ಕೆ ಮೌನಸಾಕ್ಷಿಯಾಗಿ ಕಾರ್ಯಕ್ರಮದ ವೇದಿಕೆಯಲ್ಲಿ ವಿರಾಜಾನರಾಗಿದ್ದ ರಾಜ್ಯದ ಶಿಕ್ಷಣ ಸಚಿವ ಬಿ. ಎಸ್. ನಾಗೇಶ್, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಹರೀಶ್ ಪೂಂಜ ಸಹಿತ ಗಣ್ಯಾತಿಗಣ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮಗೆ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಮೇಲೆ ಇರುವ ತಾತ್ಸಾರವನ್ನು ಜಗಜ್ಜಾಹೀರುಗೊಳಿಸಿದರು. ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಅವಮಾನಿಸೋದು ಸಾಂವಿಧಾನಿಕ ಅಪರಾಧ. ಸಂಬಂಧಿತ ಇಲಾಖೆ ಈ ಬಗ್ಗೆ ರಾಜ್ಯದ ಶಿಕ್ಷಣ ಸಚಿವ ಬಿ. ಎಸ್. ನಾಗೇಶ್ ಸಹಿತ ಜನಪ್ರತಿನಿಧಿಗಳೊಂದಿಗೆ ಕಾರ್ಯಕ್ರಮ ಸಂಘಟಕರಿಂದಲೂ ಸ್ಪಷ್ಟೀಕರಣ ಪಡೆದು ಕ್ರಮ ಕೈಗೊಳ್ಳಬೇಕಾಗಿದೆ. ‘ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ’






