ಬೆಳ್ತಂಗಡಿ: ಅಕ್ಟೋಬರ್ 13ರಂದು ನಡೆದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕ ರಘುಚಂದ್ರ ರಾವ್ ಸಂಘದ ಇನ್ನೋರ್ವ ನಿರ್ದೇಶಕ ನಾರ್ಯ ನಿವಾಸಿ ಶೀನ ಎಂಬವರನ್ನು ಜಾತಿ ಹೆಸರಲ್ಲಿ ನಿಂದನೆ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅಕ್ಟೋಬರ್ 13ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಅಸಹಜವಾಗಿ ನಿಧನರಾದ ಸಂಘದ ದೈನಿಕ ಠೇವಣಿ ಸಂಗ್ರಾಹಕ ಜಗದೀಶ್‌ರ ಕುಟುಂಬಕ್ಕೆ ಸಂಘದಿಂದ ಆರ್ಥಿಕ ನೆರವು ನೀಡುವ ವಿಚಾರ ಪ್ರಸ್ತಾಪವಾದಾಗ ಮಾತನಾಡಿದ ನಿರ್ದೇಶಕ ರಘುಚಂದ್ರ ರಾವ್, ‘ಜಗದೀಶನ ಅಂತ್ಯಕ್ರಿಯೆಯ ಎಲ್ಲಾ ವೆಚ್ಚ ಭರಿಸಿದ್ದು ನಾನೇ; ಮನ್ಸರಿಗೆ ನೀಡುವ ಹಣವನ್ನೂ ನಾನೇ ಕೊಟ್ಟದ್ದು’ ಎಂದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಸಂಘದ ಇನ್ನೋರ್ವ ನಿರ್ದೇಶಕ ನಾರ್ಯದ ಶೀನ,’ನೀವು ಮನ್ಸರು ಪದ ಬಳಸಿ ದಲಿತರ ಜಾತಿನಿಂದನೆ ಮಾಡಬಾರದು’ ಎಂದು ಸೂಚಿಸಿದಾಗ ಕೋಪಗೊಂಡ ರಘುಚಂದ್ರ ರಾವ್, ‘ಕೀಳು ಜಾತಿಯವರಾದ ನೀವೆಲ್ಲಾ ಎಲ್ಲಿರಬೇಕೋ ಅಲ್ಲಿಯೇ ಇರಬೇಕು. ನಿನಗ್ಯಾಕೆ ನಾನು ಗೌರವ ಕೊಡಬೇಕು’ ಎನ್ನುವ ಮೂಲಕ ಸಭೆಯಲ್ಲಿ ಎಲ್ಲ ನಿರ್ದೇಶಕರ ಸಮಕ್ಷಮ ನಿಂದಿಸಿರುತ್ತಾರೆ ಎಂದು ಶೀನ ದೂರಿನಲ್ಲಿ ವಿವರಿಸಿರುತ್ತಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ, ನಿರ್ದೇಶಕರಾದ ಜಯರಾಮ ಭಂಡಾರಿ, ಪ್ರೀತಮ್ ಡಿ. ಸಹಿತ ಇತರ ನಿರ್ದೇಶಕರುಗಳು ‘ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡಬೇಡಿ’ ಎಂದು ರಘುಚಂದ್ರ ರಾವ್‌ರಿಗೆ ಸೂಚಿಸಿದರೂ ‘ಕ್ಯಾರೇ’ ಮಾಡದ ರಘುಚಂದ್ರ ರಾವ್ ತಮ್ಮ ನಿಂದನಾ ಮಾತುಗಳನ್ನು ಮುಂದುವರಿಸಿ ನಮ್ಮನ್ನು ಅವಮಾನಿಸಿದ್ದಾರೆ ಎಂದು ಶೀನ ಆರೋಪಿಸಿದ್ದಾರೆ. ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.





