ಬೆಳ್ತಂಗಡಿ: ಪಂಚಾಯತ್ ಸದಸ್ಯರು, ಸಹಕಾರಿ ಬಂಧುಗಳ ಹಾಗೂ ಆತ್ಮೀಯರ ಅಭಿಲಾಷೆಯಂತೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ನವೆಂಬರ್ 14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಗಣಪತಿ ದೇವರ ದರ್ಶನ ನಡೆಸಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.ಗ್ರಾಮ ಪಂಚಾಯತ್, ನಗರ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್‌ಗಳ ಅಭಿವೃದ್ಧಿಯ ಹೊಣೆಹೊತ್ತು ಸ್ಪರ್ಧೆ ನಡೆಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ಸಹಕಾರಿ ಕ್ಷೇತ್ರದ ಸೇವೆಯ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ಹಾಗೂ ಹಳ್ಳಿಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿದ್ದು, ಇಲ್ಲಿರುವ ಕುಂದುಕೊರತೆಗಳ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಅಭಿವೃದ್ಧಿಯ ಚಿಂತನೆ ಪ್ರಮುಖ ಧ್ಯೇಯವಾಗಿದ್ದು, ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಬಯಸಿಲ್ಲ ಎಂದು ಹೇಳಿದರು.ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿ ಸದಸ್ಯರನ್ನು ಸಂಪರ್ಕಿಸಲಿದ್ದು, ಈ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ ರೈ, ಐಕಳ ದೇವಿಪ್ರಸಾದ್ ಶೆಟ್ಟಿ, ನಿರಂಜನ ಬಾವಂತ ಬೆಟ್ಟು, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಸರಿ ಸಂಘದ ಅಧ್ಯಕ್ಷ ಅರವಿಂದ ಜೈನ್, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಇ. ಸುಂದರ ಗೌಡ, ಬಾಹುಬಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶಮಂತ ಕುಮಾರ್ ಜೈನ್, ಕುಮಾರ್ ನಾಥ್, ಉಷಾಲತಾ, ವೃಷಭ ಆರಿಗ ಮತ್ತಿತರರು ಉಪಸ್ಥಿತರಿದ್ದರು.ಮಂಗಳೂರಿನ ಓಷನ್ ಪರ್ಲ್ ಹೋಟೆಲಿನ ಮುಂಭಾಗದ ಇನ್‌ಲ್ಯಾಂಡ್ ಕಟ್ಟಡದಲ್ಲಿ ನವೆಂಬರ್ 16ರಂದು ಚುನಾವಣಾ ಸಿದ್ಧತೆಗಳಿಗಾಗಿ ಕಚೇರಿ ಆರಂಭಗೊಳ್ಳಲಿದೆ. ನವೆಂಬರ್ 22ರಂದು ಮಂಗಳೂರಿನಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.