ಬೆಳ್ತಂಗಡಿ: ದೇಶದಲ್ಲಿ ಅನೇಕ ಚುನಾವಣೆಗಳು ನಡೆಯುತ್ತಿವೆ. ಪ್ರತಿ ಚುನಾವಣೆಯ ಮಹತ್ವ ಮತ್ತು ಮತದಾನದ ರೀತಿಯನ್ನು ಭಾರತೀಯ ಪ್ರಜೆಗಳಾದ ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಹಾಗೂ ಬೆಳ್ತಂಗಡಿಯ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.ಅವರು ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 4ರಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಮತದಾರರ ಸಾಕ್ಷರತಾ ಸಂಘ ಉದ್ಘಾಟಿಸಿ ಮಾತನಾಡುತ್ತಿದ್ದರು.ಸಾಕಷ್ಟು ಜನಪ್ರತಿನಿಧಿಗಳಿಗೇ ಮತವನ್ನು ಹೇಗೆ ಚಲಾಯಿಸಬೇಕು ಎಂಬ ಪರಿಜ್ಞಾನವಿರುವುದಿಲ್ಲ. ಹಾಗಾಗಿ ಪ್ರತಿ ಚುನಾವಣೆಯಲ್ಲಿ ಮತ ಚಲಾವಣೆಯ ತಿಳುವಳಿಕೆಯನ್ನು ಪ್ರತಿಯೊಬ್ಬರೂ ಹೊಂದಿಕೊಳ್ಳಬೇಕು. ವಿದ್ಯಾರ್ಥಿಗಳು ಈ ಸಂಘದ ಪ್ರಯೋಜನ ಪಡೆದುಕೊಂಡು ಮತ ಚಲಾಯಿಸುವ ಅಧಿಕಾರ ಬಂದಾಗ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಬಂಗೇರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾಲೇಜಿನ ಸಾಂಸ್ಕಂತಿಕ ವಿಭಾಗದ ನಿರ್ದೇಶಕ ಹಾಗೂ ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಮೂಡುಕೋಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ, ಸಂಘ ನಿರ್ದೇಶಕಿ ಅಶ್ವಿನಿ ಪ್ರಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಹಾಗೂ ಕಾಲೇಜಿನ ಸಾಂಸ್ಕಂತಿಕ ವಿಭಾಗದ ನಿರ್ದೇಶಕಿ ಹೇಮಾವತಿ ಬಹುಮಾನಿತರ ಪಟ್ಟಿ ವಾಚಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ಸವಿತಾ ವಂದಿಸಿದರು.






