ಬೆಳ್ತಂಗಡಿ: ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ದೀರ್ಘ ಇತಿಹಾಸವುಳ್ಳ ಬೆಳ್ತಂಗಡಿ ಲಯನ್ಸ್ ಕ್ಲಬ್ಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಅವರ ಅಧಿಕೃತ ಭೇಟಿ ಮತ್ತು ವಿವಿಧ ಸೇವಾ ಚಟುವಟಿಕೆಗಳ ಅನಾವರಣ ಕಾರ್ಯಕ್ರಮ ಡಿಸೆಂಬರ್ 23ರಂದು ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೇಂಮತ ರಾವ್ ಯರ್ಡೂರು, ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ. ಜೈನ್ ತಿಳಿಸಿದರು.ಬೆಳ್ತಂಗಡಿಯ ಪ್ರೆಸ್ಕ್ಲಬ್ನಲ್ಲಿ ಡಿಸೆಂಬರ್ 22ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ಅಂದು ಅಪರಾಹ್ನ 3.00 ಗಂಟೆಗೆ ಲಯನ್ಸ್ ಭವನದಲ್ಲಿ ರಾಜ್ಯಪಾಲರನ್ನು ಸ್ವಾಗತಿಸಿಕೊಂಡು ಬಳಿಕ ಸೇವಾ ಚಟುವಟಿಕೆಗಳ ಅನಾವರಣ ನಡೆಯಲಿದೆ. ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಧರಣೇಂದ್ರ ಕೆ. ಜೈನ್ ಅವರು ಕೊಡಮಾಡುವ ನೇಫ್ಕಿನ್ ಬರ್ನಿಂಗ್ ಕಿಟ್ ಹಸ್ತಾಂತರ, ಸವಣಾಲು ಸುಭಾಶ್ಚಂದ್ರ ಬೋಸ್ ಅನುದಾನಿತ ಶಾಲೆಗೆದತ್ತಾತ್ರೇಯ ಗೊಲ್ಲ ಅವರು ಕೊಡಮಾಡುವ ಊಟದ ಬಟ್ಟಲು ಸ್ಟ್ಯಾಂಡ್ ಹಸ್ತಾಂತರ, ಲಯನ್ಸ್ ಹಿರಿಯ ಸದಸ್ಯ ರಘುರಾಮ ಗಾಂಭೀರ ಅವರಿಗಾಗಿ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಜಂಟಿಯಾಗಿ ಕೊಡುಗೆ ನೀಡಿ ನಿರ್ಮಾಣವಾಗುತ್ತಿರುವ ನೂತನ ಗೃಹದ ವೀಕ್ಷಣೆ, ಗುರುವಾಯನಕೆರೆ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ನ ಅಧ್ಯಕ್ಷ ಹೇಂಮತ ರಾವ್ ಅವರು ಕೊಡುಗೆ ನೀಡುವ ಪೀಠೋಪಕರಣ ಹಾಗೂ ಸ್ಟೀಲ್ ಕಪಾಟು ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಗುರುವಾಯನಕೆರೆ ಮಯೂರ ಕನ್ವೆನ್ಶನ್ ಹಾಲ್ ನಲ್ಲಿ ನಡೆಯುವ ಕ್ಲಬ್ನ ಪದಾಧಿಕಾರಿಗಳ ಸಭೆಯ ಬಳಿಕ ಸಾರ್ವಜನಿಕ ಸಮಾರಂಭ ನಡೆಯಲಿದೆ. ಈ ಸಭೆಯಲ್ಲಿ ರಾಜು ಶೆಟ್ಟಿ ಬೆಂಗೆತ್ಯಾರು ಅವರು ಕೊಡುಗೆ ನೀಡುವ ಕಂಕಣ ಭಾಗ್ಯ ಸಹಾಯ ಧನ ವಿತರಣೆ, ರವೀಂದ್ರ ಶೆಟ್ಟಿ ಬಳಂಜ ಮತ್ತು ಉಮೇಶ್ ಶೆಟ್ಟಿ ಉಜಿರೆ ಅವರು ಎರಡು ಫಲಾನುಭವಿಗಳಿಗೆ ನೀಡುವ ವೈದ್ಯಕೀಯ ನೆರವು ಮೊತ್ತದ ಹಸ್ತಾಂತರ ಇತ್ಯಾಧಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು. ವಲಯಾಧ್ಯಕ್ಷ ವಸಂತ ಶೆಟ್ಟಿ ಮಾತನಾಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಹೇಂಮತ ರಾವ್ ಅವರ ನೇತೃತ್ವದಲ್ಲಿ ಅವರ ಅವಧಿ ಪ್ರಾರಂಭದಿಂದಲೂ ಹತ್ತು ಹಲವು ಜನಪರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಲಯನ್ಸ್ ಜಿಲ್ಲೆ ನೀಡುವ ಎಲ್ಲಾ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲಿಸುತ್ತಾ ಅಂತಾರಾಷ್ಟ್ರೀಯ ಸಂಸ್ಥೆಗೆ ಸಲ್ಲುವ ವರದಿ ಮತ್ತು ದೇಣಿಗೆಗಳನ್ನೂ ಕ್ರಮಬದ್ಧವಾಗಿ ನೀಡುವ ಮೂಲಕ ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ದತ್ತಾತ್ರೇಯ ಗೊಲ್ಲ ಉಪಸ್ಥಿತರಿದ್ದರು.