ದೇರಾಜೆಬೆಟ್ಟ: ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಧಾರ್ಮಿಕ ಚಿಂತನೆ ಬಲಗೊಳ್ಳಲಿ: ಪೂಂಜ

ದೇರಾಜೆಬೆಟ್ಟ: ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಧಾರ್ಮಿಕ ಚಿಂತನೆ ಬಲಗೊಳ್ಳಲಿ: ಪೂಂಜ
Facebook
Twitter
LinkedIn
WhatsApp


ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರದಲ್ಲಿ ಸಕ್ರೀಯವಾಗಿ ಪಾಲು ಪಡೆದುಕೊಂಡಾಗ ನಮ್ಮೊಳಗಿನ ಧಾರ್ಮಿಕ ಚಿಂತನೆ ಬಲಗೊಳ್ಳುತ್ತದೆ. ಮರೋಡಿಯ ಎತ್ತರದ ಸುಂದರ ಪ್ರದೇಶದಲ್ಲಿ ಕೊಡಮಣಿತ್ತಾಯ ದೈವದ ಸಾನಿಧ್ಯ ಬೆಳಗಿದ್ದು, ಎಲ್ಲರ ಸಹಕಾರದಲ್ಲಿ ಪುರಾತನ ಧಾರ್ಮಿಕ ತಾಣವೊಂದು ಅಭಿವೃದ್ಧಿ ಕಂಡಿದೆ. ಮರೋಡಿ ಗ್ರಾಮಸ್ಥರಲ್ಲಿ ಧಾರ್ಮಿಕ ಚಿಂತನೆ ವ್ಯಾಪಕವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಮರೋಡಿ ಗ್ರಾಮದ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದಲ್ಲಿ ದೈವಗಳ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮದ ನಿಮಿತ್ತ ಫೆಬ್ರವರಿ 20ರಂದು ಜರಗಿದ ಧಾರ್ಮಿಕಸಭೆಯಲ್ಲಿ ಮುಖ್ಯಾತಿಥಿಯಾಗಿ ಪಾಲ್ಗೊಂಡು ಮಾತನಾಡಿ, ತಾಲೂಕಿನಲ್ಲಿ 15ಕ್ಕೂ ಅಧಿಕ ಗರಡಿಗಳ ಅಭಿವೃದ್ಧಿಯಲ್ಲಿ ಪಾಲು ಪಡೆಯುವ ಅವಕಾಶ ಸಿಕ್ಕಿದೆ. ಪೊಸರಡ್ಕ ಕ್ಷೇತ್ರದ ಅಭಿವೃದ್ಧಿಗೆ ಇದು ಮುನ್ನುಡಿಯಾಗಲಿ. ಅದರ ಅಭಿವೃದ್ಧಿ ಕಾರ್ಯಕ್ಕೂ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿಮಾತನಾಡುತ್ತಾ, ಸೀಮೆಗೆ ಸಂಬಂಧಿತ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಕಂಡಿದೆ. ಪುರಾತನ ಸಾನಿಧ್ಯವಿದ್ದ ದೇರಾಜೆಬೆಟ್ಟವೂ ಪುನರ್ ಪ್ರತಿಷ್ಠೆ ಮಾಡುವ ಮೂಲಕ ಇಂದು ಬೆಳಗಿದೆ. ಇದರಲ್ಲಿ ಪಾಲುಪಡೆದ ಗುತ್ತು, ಬರ್ಕೆಯವರು ಹಾಗೂ ಸಹಕಾರ ನೀಡಿದ ಊರವರಿಗೂ ಒಳ್ಳೆಯದಾಗಲಿ ಎಂದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅವರು ಮಾತನಾಡಿ, ತುಳುನಾಡು ಧಾರ್ಮಿಕ ವೈವಿಧ್ಯತೆಯ ನಾಡು. ಇಲ್ಲಿ ದೈವ ದೇವರ ಆರಾಧನೆಗೆ ನಂಬಿಕೆ, ಶ್ರದ್ಧೆ, ಭಕ್ತಿಯೇ ಪ್ರಧಾನ.  ನಮ್ಮ ಬದುಕು ಧಾರ್ಮಿಕ ಚೌಕಟ್ಟಿನಲ್ಲಿ ಸಾಗುತ್ತಿದೆ ಎಂದರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಧಾರ್ಮಿಕ ಪರಿಷತ್‌ನ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಮಾತನಾಡಿ, ಮರೋಡಿ ಗ್ರಾಮಸ್ಥರು ಹೃದಯ ಶ್ರೀಮಂತರು. ಇಲ್ಲಿನ ಎಲ್ಲಾ ದೇಗುಲಗಳು ಅಭಿವೃದ್ಧಿ ಕಂಡಿದ್ದು, ಊರಿಗೆ ಸುಭೀಕ್ಷೆಯಾಗಲಿ ಎಂದರು. ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಶ್ರೀ ಜೈನ್, ಬ್ರಹ್ಮ ಕುಂಭಾಭಿಷೇಕ ಸಮಿತಿಯ ಕೋಶಾಧಿಕಾರಿ ರಾಜೇಂದ್ರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ, ಸಮಿತಿ ಪದಾಧಿಕಾರಿಗಳಾದ ಜಿನೇಂದ್ರ ಬಲ್ಲಾಳ್ ಮಲ್ಲಾರಬೀಡು, ಜಿನೇಂದ್ರ ಜೈನ್ ಹರಂಬೆಟ್ಟುಗುತ್ತು, ಜಯವರ್ಮ ಬುಣ್ಣು ಕುಕ್ಕೆರಬೆಟ್ಟುಗುತ್ತು, ಸುದರ್ಶನ ಜೈನ್ ಪಾಂಡಿಬೆಟ್ಟುಗುತ್ತು, ಉದಯ ಪೂಜಾರಿ ನಾಪ, ಗೋಪು ಪೂಜಾರಿ ಉಚ್ಚೂರು, ಆದಿತ್ಯ ಪಿ.ಕೆ. ಮತ್ತೊಟ್ಟು, ರಮೇಶ್ ಪೂಜಾರಿ ಬಲಂತ್ಯರೊಟ್ಟು, ಪದ್ಮರಾಜ ಶೆಟ್ಟಿ ಮುಂಡಾಜೆ, ಶಶಿಕಾಂತ್ ಹೆಗ್ಡೆ ಕುಕ್ಕಿರಬೆಟ್ಟುಗುತ್ತು, ವಿಜಯ ಕುಮಾರ್ ಬಂಗ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ ಬೆಳ್ಳಿಬೀಡು ಸ್ವಾಗತಿಸಿ, ಶಿಕ್ಷಕಿ ಸುಫಲ ವಂದಿಸಿದರು. ವಿಶುಕುಮಾರ್ ಜೈನ್ ನಿರೂಪಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಗುತ್ತಿಗೆದಾರ ನಾರಾಯಣ ಭಟ್ ಮಕ್ಕಿ, ದೈವಸ್ಥಾನಕ್ಕೆ ವಿನ್ಯಾಸ ನೀಡಿದ ಸುಧೀರ್, ಮಾಸ್ಟರ್ ಪ್ಲವರ್ ಮೂಡಬಿದಿರೆ ಇದರ ಫಕೀರಬ್ಬ ಅವರನ್ನು ಕ್ಷೇತ್ರದ ವತಿಯಿಂದ ಸಮ್ಮಾನಿಸಲಾಯಿತು. ಸಹಕಾರ ನೀಡಿದ ಗುತ್ತುಬರ್ಕೆಯ ಗುರಿಕಾರರನ್ನು ಹಾಗೂ ರೂಪಾಯಿ 50 ಸಾವಿರಕ್ಕೂ ಮೇಲ್ಪಟ್ಟ ದಾನಿಗಳನ್ನು ಅಭಿನಂದಿಸಲಾಯಿತು.
ಕೇಳ ಅನಂತ ಆಸ್ರಣ್ಣರ ನೇತೃತ್ವದಲ್ಲಿ ದೈವ ಹಾಗೂ ಕೊಡಮಣಿತ್ತಾಯ ದೈವಗಳ ಮಂಚ ಪ್ರತಿಷ್ಠಾಪನೆ, ಕಲಶಾಭಿಷೇಕ, ಪರ್ವ ಸಂಕ್ರಾಂತಿ, ಬ್ರಹ್ಮ ಕುಂಭಾಭಿಷೇಕ, ದರ್ಶನ ಜರಗಿತು. ಸಂಜೆ ದೈವದ ಭಂಡಾರ ಉಚ್ಚೂರು ಮನೆಯಿಂದ, ಕೊಡಮಣಿತ್ತಾಯ ದೈವದ ಭಂಡಾರ ಪಾಂಡಿಬೆಟ್ಟು ಮನೆಯಿಂದ ಆಗಮಿಸಿ ದೈವ, ಕೊಡಮಣಿತ್ತಾಯ ದೈವಗಳ ನೇಮೋತ್ಸವ ಜರಗಿತು.

Latest 5

Related Posts