ಬೆಳ್ತಂಗಡಿ: ಡಾ. ಬಿ. ಯಶೋವರ್ಮ ಅವರು ಸ್ನೇಹಮಯಿಯಾಗಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದವರು. ಅವರು ತಾಲೂಕಿನ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಸಲ್ಲಿಸಿರುವ ಸೇವೆ ಅನನ್ಯವಾದುದು. ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ, ಸುಂದರವಾಗಿ ನಡೆಸಿ ನಮಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ. ಹಿರಿಯರನ್ನು ಗೌರವಿಸುವ ಅವರು ದಾರ್ಶನಿಕರಾಗಿ, ಶಿಕ್ಷಣತಜ್ಞರಾಗಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಅವರನ್ನು ಕಳೆದುಕೊಂಡ ನಷ್ಟವನ್ನು ಭರಿಸುವುದು ಕಷ್ಟದಾಯಕ ಎಂದು ಹಿರಿಯ ಸಾಹಿತಿ ಎನ್. ಜಿ. ಪಟವರ್ಧನ್ ಹೇಳಿದರುಅವರು ಜೂನ್ 18ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸೆಮಿನಾರ್ ಹಾಲ್‌ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಜರಗಿದ ಡಾ. ಬಿ. ಯಶೋವರ್ಮ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಅಭಿಯಾನಗಳಿಗೆ ಅವರು ನೀಡಿರುವ ಮಾರ್ಗದರ್ಶನದಿಂದ ತೆರೆಯ ಮರೆಯಲ್ಲಿದ್ದ ಅನೇಕ ಪ್ರತಿಭೆಗಳು ಹೊರ ಹೊಮ್ಮಲು ಕಾರಣವಾಗಿದೆ. ಪ್ರತಿ ಸಮ್ಮೇಳನದಲ್ಲಿ ಹೊಸತನಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಸಮಾರಂಭಗಳ ಮೆರಗು ಹೆಚ್ಚಿಸಲು ಶ್ರಮಿಸಿದವರು. ಸಮಯಪ್ರಜ್ಞೆ, ಓದುವ ಹವ್ಯಾಸವನ್ನು ಬೆಳೆಸಿಕೊಂಡ ಅವರು ಸಾಹಿತಿಗಳ ದಾಖಲೀಕರಣವಾಗಿ ಜಿಲ್ಲೆ ಹಾಗೂ ತಾಲೂಕನ್ನು ಸಾಹಿತ್ಯದ ಮಾದರಿಯಾಗಿ ರೂಪಿಸಬೇಕೆಂಬ ಅಭಿಲಾಷೆ ಹೊಂದಿದ್ದರು. ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದೇ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದರು.ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ, ಆತ್ಮೀಯ ಮಾತುಗಳ ಮೂಲಕ ಉತ್ತಮ ಒಡನಾಟ ಹೊಂದಿದ್ದ ಅವರು ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು. ನಿವೃತ್ತ ಪ್ರಿನ್ಸಿಪಾಲ್ ಕೃಷ್ಣಪ್ಪ ಪೂಜಾರಿ ಯಶೋವರ್ಮ ಅವರ ವೃತ್ತಿಧರ್ಮ ಹಾಗೂ ಪರೋಪಕಾರದ ಗುಣ ಎಲ್ಲರಿಗೆ ಅನುಕರಣೀಯ ಹಾಗೂ ಅನುಸರಣೀಯ. ಅವರು ಮರೆಲಾಗದ ಹಾಗೂ ಮರೆಯಬಾರದ ವ್ಯಕ್ತಿಯಾಗಿ, ಶುದ್ಧ ಚಾರಿತ್ರ್ಯದಿಂದ ಸೌಂದರ್ಯಪ್ರಜ್ಞೆ, ಪ್ರಕೃತಿ-ಪರಿಸರ ಪ್ರೇಮ ಬೆಳೆಸಿಕೊಂಡವರು. ಸ್ನಿಗ್ಧ ಮನಸ್ಸಿನ ಘನತೆ, ಕಳಂಕ ರಹಿತ ಚಾರಿತ್ರ್ಯ, ಗುಣಗ್ರಾಹಿತ್ವದಿಂದ ಸೇವಾ ಧರ್ಮವನ್ನು ಜೀವನಧರ್ಮವಾಗಿ, ಕರ್ತವ್ಯಧರ್ಮವಾಗಿ ಸಾಧನೆ ಮತ್ತು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ ಅವರಿಗೆ ಯಶೋರತ್ನವಾಗಿ ಸಾಯುಜ್ಯ ಪ್ರಾಪ್ತಿಯಾಗಲಿ ಎಂದು ನುಡಿನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಮಾತನಾಡಿ, ಯಶೋವರ್ಮ ಅವರು ಅಧ್ಯಯನ ಹಾಗೂ ವಿಮರ್ಶೆ ಮೂಲಕ ದಕ್ಷತೆಯಿಂದ ಕೆಲಸ ಮಾಡುವ ಚಾಕಚಕ್ಯತೆ ಹೊಂದಿದ್ದರು. ಕಾರ್ಯಕ್ರಮ ಸಂಯೋಜನೆ, ಸಮಯ ಪಾಲನೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಶೈಕ್ಷಣಿಕ ಕ್ಷೇತ್ರದ ಅಜಾತಶತ್ರುವಾಗಿ ಸಾಧನೆಯ ಮೂಲಕ ಶಾಶ್ವತ ನೆನಪು ಉಳಿಸಿದ್ದಾರೆ. ಅವರ ಮಾರ್ಗದರ್ಶನ, ನೆನಪು ನಮಗೆ ಸದಾ ಪ್ರೇರಣೆಯಾಗಲಿ ಎಂದರು.ನಿವೃತ್ತ ಪ್ರಾಧ್ಯಾಪಕ ಎಸ್ ಡಿ ಶೆಟ್ಟಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಅಧಿಕಾರಿ ಸೋಮಶೇಖರ ಶೆಟ್ಟಿ, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಉದಯಚಂದ್ರ ಪಿ. ಎನ್., ಧರ್ಮಸ್ಥಳದ ಬಿ. ಭುಜಬಲಿ, ಎಂ. ಜಿ. ಶೆಟ್ಟಿ ಉಜಿರೆ, ಸುಬ್ರಹ್ಮಣ್ಯಕುಮಾರ್ ಅಗರ್ತ ಪಾಂಡುರಂಗ ಬಾಳಿಗಾ ಮೊದಲಾದವರು ಉಪಸ್ಥಿತರಿದ್ದರು. ಡಾ. ಬಿ. ಯಶೋವರ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಿ, ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.






