ಬೆಳ್ತಂಗಡಿ: ಸೃಷ್ಟಿಯ ಎಲ್ಲಾ ತತ್ವಗಳು ಪ್ರತಿಯೊಂದು ದೇವಾಲಯಗಳಲ್ಲಿದೆ ಎಂದು ವಾಸ್ತು ತಜ್ಞ ಪ್ರಸಾದ ಮುನಿಯಂಗಳ ಹೇಳಿದರು.ಅವರು, ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ಸನಿಹದ ಕರಿಮಣೇಲು ಗ್ರಾಮದ ಶ್ರೀಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ ಸಂದರ್ಭ ಜೂನ್ 19ರಂದು ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.ಲೋಕಕ್ಕೆ ಅನುಗ್ರಹ ಸಿಗಬೇಕಾದರೆ ಭಗವಂತನ ಪ್ರತಿಷ್ಠೆ ಅಗತ್ಯ. ದೈವಿಕ ಚಿಂತನೆ ಮಾಡಲು ಅತ್ಯಂತ ಸರಳ ವಿಧಾನ ಪ್ರತಿಮಾ ಪೂಜೆಯಾಗಿದೆ. ದೇಹದ ರಚನೆಯಂತೆ ದೇವಾಲಯವೂ ಇರುತ್ತದೆ. ಪಂಚತತ್ವಗಳನ್ನು ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಬ್ರಹ್ಮಾಂಡದಲ್ಲಿರುವ ಸಮಸ್ತ ಚೈತನ್ಯಗಳು ಇರುವಂತಾಗಲು ಬ್ರಹ್ಮಕಲಶ ಮಾಡಲಾಗುತ್ತದೆ. ಷಡಾಧಾರ ಪ್ರತಿಷ್ಠೆಯಂತಹ ಅಪೂರ್ವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾಕೆಂದರೆ ಇಂತಹ ಕಾರ್ಯಕ್ರಮ ನೋಡಲು ಮತ್ತೆಂದಿಗೂ ಸಿಗದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡ್ಯಾರಬೆಟ್ಟಿನ ಆಡಳಿತೆದಾರ ಎ. ಜೀವಂಧರ ಕುಮಾರ್ ವಹಿಸಿದ್ದರು. ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಡಿ., ಉದ್ಯಮಿ ಕೆ. ಭಾಸ್ಕರ ಪೈ, ಪೆರಿಂಜೆ ರಾಜ್ಯಗುತ್ತು ಪಿ. ಜಯರಾಜ ಕಂಬಳಿ, ತೀರ್ಥ ಮಂಟಪದ ದಾನಿ ಪಾಳೆಂಜ ಕರಂಬಾರಿನ ಸದಾನಂದ ಹೆಗ್ಡೆ, ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕರಿಮಣೇಲು ಮರಾಠಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಜಗೋಪಾಲ ಭಟ್, ಚೆನ್ನೈನ ಸುಕೀರ್ತಿರಾಜ ಅಜ್ರಿ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಕೆ. ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.ವೇದಮೂರ್ತಿ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿಯವರ ನೇತ್ವದಲ್ಲಿ, ಅರ್ಚಕ ಚಂದ್ರಶೇಖರ ಅಸ್ರಣ್ಣ ಅವರ ಸಹಕಾರದಲ್ಲಿ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ ನೆರವೇರಿತು.ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಪ್ರತಾಪಸಿಂಹ ನಾಯಕ್ ಭೇಟಿ ನೀಡಿದರು.