ಬೆಳ್ತಂಗಡಿ: ಇಂದು ಪುಸ್ತಕ ಓದುವ ಮತ್ತು ಬರೆಯುವ ಹವ್ಯಾಸ ಕಡಿಮೆಯಾಗಿದೆ. ಪ್ರತಿಯೊಂದು ಕಡೆ ಸಾಹಿತ್ಯಾರಾಧಕರು ಹಾಗೂ ಸಾಹಿತ್ಯಾಭಿಮಾನಿಗಳು ಇರುತ್ತಾರೆ. ಸಾಹಿತ್ಯವನ್ನು ಆಸಕ್ತಿಯಿಂದ ಓದಿ,ಅಭಿರುಚಿ ಬೆಳೆಸಿಕೊಳ್ಳಬೇಕು. ಪಟವರ್ಧನ್ ಅವರ ಬರಹಗಳ ಕೃತಿಗಳು ಲೇಖನಗಳ ಹರಿವು, ಅಳ ಮತ್ತು ಮಾನವ ಪ್ರಜ್ಞೆಯ ಸ್ತರವನ್ನು ತಟ್ಟುತ್ತದೆ . ಸುಲಲಿತವಾಗಿ ಓದಿಸಿಕೊಂಡು ಹೋಗುವ ಸಂಗ್ರಹಯೋಗ್ಯ ಕೃತಿ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಪಿ. ಎನ್ .ಉದಯಚಂದ್ರ ಹೇಳಿದರು. ಅವರು ಜೂನ್ 21ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ಎನ್. ಜಿ. ಪಟವರ್ಧನ್ ಅವರ ನೂತನ ಕೃತಿಗಳಾದ 81 ಅಂಕಣ ಬರಹಗಳ ಸಂಗ್ರಹ ‘ಕಿರಿದರೊಳ್ ಪಿರಿದರ್ಥ’ ಹಾಗೂ 18ಲಲಿತ ಪ್ರಬಂಧಗಳ ಸಂಗ್ರಹ ‘ಅಮೃತಬಳ್ಳಿಯ ಸನ್ನಿಧಿ ಮತ್ತು ಇತರ ಪ್ರಬಂಧಗಳು’ ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಲೇಖಕರ ಕೃತಿಗಳ ಬಗೆಗೆ ವಿದ್ಯಾರ್ಥಿಗಳಿಗೆ ಚರ್ಚೆ, ವಿಚಾರಗೋಷ್ಠಿ,, ಅಧ್ಯಯನ ಶಿಬಿರ ನಡೆಸಬಹುದು ಎಂದು ಉದಯಚಂದ್ರ ಅಭಿಪ್ರಾಯಿಸಿದರು. ಕೃತಿಕಾರ ಪ್ರೊ. ಎನ್. ಜಿ. ಪಟವರ್ಧನ್ ಮಾತನಾಡುತ್ತಾ; ಸಮಾಜ, ಪ್ರಕೃತಿ ಮತ್ತು ಜೀವನ ತನಗೆ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದೆ. ಸತತ ಅಭ್ಯಾಸದಿಂದ ಸಾಹಿತ್ಯ, ಕಾವ್ಯ ಒಲಿಯುವುದು. ಕವಿಗೆ ಏಕಾಗ್ರತೆ ಬೇಕು. ಯಾವುದೇ ಒಂದು ಸಣ್ಣ ವಿಷಯವೂ ಕಾವ್ಯಕ್ಕೆ ಪ್ರೇರಣೆಯಾಗಬಹುದು ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ಡಿ. ಯದುಪತಿ ಗೌಡ, ಡಾ| ಎನ್. ಎಂ.ತುಳುಪು ಳೆ, ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್, ಸಹಾಯಕ ಪ್ರಾಧ್ಯಾಪಕ ದಿವಾ ಕೊಕ್ಕಡ ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಉಮೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಭಟ್ ಚೊಕ್ಕಾಡಿ ವಂದಿಸಿದರು.






