ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಕೊಕ್ಕಡ ಅಮೃತ ಗ್ರಾಮ ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ಸೌತಡ್ಕ ಶ್ರೀ ಗಣೇಶ ಕಲಾ ಮಂದಿರದಲ್ಲಿ ಜೂ 21ರಂದು 8ನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಪ್ರಾತ್ಯಕ್ಷಿಕೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜನತೆಯ ಅರೋಗ್ಯ ಸುಧಾರಣೆಗಾಗಿ ಸರ್ವರೂ ನಿತ್ಯ ಯೋಗಾಭ್ಯಾಸ ನಡೆಸಿ ಆರೋಗ್ಯವಂತರಾಗಬೇಕೆಂಬ ಮಹದಾಸೆಯಿಂದ ವಿಶ್ವ ಯೋಗ ದಿನಾಚರಣೆಯನ್ನು ದೇಶಾದ್ಯಂತ ನಡೆಸಲು ಕರೆ ನೀಡಿದ್ದು, ಅದರಂತೆ 8ನೇ ವರ್ಷದಲ್ಲಿ ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಯೋಗದಿಂದ ಅರೋಗ್ಯ ಕಾಪಾಡಿಕೊಳ್ಳೋಣ ಎಂದು ಹೇಳಿದರು. ವೇದಿಕೆಯಲ್ಲಿ ಹಿರಿಯ ಲೆಕ್ಕ ಪರಿಶೋಧಕ ಬಿ. ವಿ. ರವೀಂದ್ರನಾಥ್, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಕೆ., ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಅಲಂಬಿಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯರಾಜ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಯೋಗ ಶಿಕ್ಷಕರು ಉಪಸ್ಥಿತರಿದ್ದರು. ಯೋಗ ಶಿಬಿರದಲ್ಲಿ ಸೌತಡ್ಕ ಪರಿಸರದ ಸುಮಾರು 250ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






