ಮುದ್ರಾಧಾರಣೆಯಿಂದ ಜನ್ಮಾಂತರದ ಪಾಪಕರ್ಮ ದೂರ: ಸುಬ್ರಹ್ಮಣ್ಯಶ್ರೀಗಳು

ಮುದ್ರಾಧಾರಣೆಯಿಂದ ಜನ್ಮಾಂತರದ ಪಾಪಕರ್ಮ ದೂರ: ಸುಬ್ರಹ್ಮಣ್ಯಶ್ರೀಗಳು
Facebook
Twitter
LinkedIn
WhatsApp

                               ಬೆಳ್ತಂಗಡಿ: ಆಷಾಢ ಶುದ್ಧ ಏಕಾದಶಿ ದಿನದಂದು  ಸುದರ್ಶನ ಹವನದಲ್ಲಿ ಭಗವಂತನ ಆಯುಧವಾದ ಶಂಖ-ಚಕ್ರ ಚಿಹ್ನೆಯನ್ನು    ಅಭಿಮಂತ್ರಿಸಿ, ತೋಳುಗಳಲ್ಲಿ ಧರಿಸುವುದು ಪರಂಪರೆ ಯಿಂದ ನಡೆದುಕೊಂಡು ಬಂದಿದೆ.  ಮುದ್ರಾಧಾರಣೆಯಿಂದ  ಆರೋಗ್ಯಕರವಾಗಿಯೂ ಭಗವಂತನ ಸಾಮೀಪ್ಯ ಹೊಂದಲು  ಸಹಕಾರಿಯಾಗಿ  ಜನ್ಮಾಂತರದ ಪಾಪಕರ್ಮಗಳು ಪರಿಹಾರವಾಗುವುದೆಂದು ಶಾಸ್ತ್ರೀಯವಾಗಿಯೂ  ನಂಬಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.                          ಅವರು ಜುಲೈ 10ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಷಾಢ ಪ್ರಥಮೈಕಾದಶೀ ಪ್ರಯುಕ್ತ  ಬೆಳ್ತಂಗಡಿ ತಾಲೂಕಿನ ಭಕ್ತಾದಿಗಳಿಗೆ ಮುದ್ರಾಧಾರಣೆ ನೆರವೇರಿಸಿ  ಆಶೀರ್ವಚನ ನೀಡುತ್ತಿದ್ದರು. ಆಷಾಢ ಶುದ್ಧ ದಶಮಿಯಿಂದ ಕಾರ್ತೀಕ ಮಾಸದ ಉತ್ಥಾನ ದ್ವಾದಶಿವರೆಗೆ ನಾಲ್ಕು ತಿಂಗಳ ಕಾಲ ಭಗವಂತನು ಯೋಗ ನಿದ್ರೆಯಲ್ಲಿರುವ ಸಮಯವಾಗಿದ್ದು ಸಾತ್ವಿಕವಾದ ಸ್ಪಂದನಾ ಶಕ್ತಿ ಜಾಗೃತಿಗೊಳ್ಳುವುದು. ಅದು ವಿಶೇಷ ಅಧ್ಯಾತ್ಮ ಸಾಧನೆಗೆ ಯೋಗ್ಯ ಪರ್ವ ಕಾಲ.  ಎಲ್ಲರೂ ಚಾತುರ್ಮಾಸದ ಅವಧಿಯಲ್ಲಿ ಭಗವಂತನ ಮಹಿಮೆ ಶ್ರವಣ, ವಿಶೇಷ ಅನುಷ್ಠಾನ ಮಾಡಿ ಬದುಕು ಶಾಶ್ವತಗೊಳಿಸಬೇಕು.  ಯತಿಗಳಿಗೆ  ಪಾಠಪ್ರವಚನ, ಧಾರ್ಮಿಕ ಉಪನ್ಯಾಸಗಳಿಗೆ ಪ್ರಶಸ್ತ ಕಾಲ. ಚಾತುರ್ಮಾಸ ವ್ರತಾಚರಣೆಗೆ ಸಾವಿರಾರು ವರ್ಷಗಳಿಂದ ಮಹತ್ವದ ಸ್ಥಾನಮಾನ ದೊರೆತಿದೆ ಎಂದು ನುಡಿದರು.                            ಶ್ರೀ ಜನಾರ್ದನ ದೇವಸ್ಥಾನದ ಪರವಾಗಿ ಶರತ್‌ಕೃಷ್ಣ ಪಡುವೆಟ್ಣಾಯರು ಶ್ರೀಗಳವರನ್ನು ಭಕ್ತಿ ಗೌರವದಿಂದ ಸ್ವಾಗತಿಸಿ  ಬರಮಾಡಿಕೊಂಡರು. ಶ್ರೀಗಳು ಶ್ರೀ ಜನಾರ್ದನ ಸ್ವಾಮಿ ಹಾಗೂ ಪರಿವಾರ ದೇವರ ದರ್ಶನ ಪಡೆದು ಬಳಿಕ ತಾಲೂಕಿನ 400ಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಜಾತಿ ಮತ ಭೇದವಿಲ್ಲದೆ  ಮುದ್ರಾಧಾರಣೆ ನಡೆಸಿದರು. ವೇದಮೂರ್ತಿ ಶ್ರೀಪತಿ ಎಳಚಿತ್ತಾಯರು ಸುದರ್ಶನ ಹವನ ಧಾರ್ಮಿಕ ವಿಧಿ ನೆರವೆರಿಸಿದರು. ತಾಲೂಕು ತುಳು ಶಿವಳ್ಳಿ  ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಜಿಲ್ಲಾಧ್ಯಕ್ಷ ಡಾ| ಎಂ. ಎಂ. ದಯಾಕರ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಸೇರಿದಂತೆ  ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿ ಶ್ರೀಗಳವರಿಂದ  ಮುದ್ರಾಧಾರಣೆ  ಹಾಕಿಸಿಕೊಂಡರು                                                                 

Latest 5

Related Posts