ಬೆಳ್ತಂಗಡಿ: ಭಾವಪೂರ್ಣ ಹಾಸ್ಯಗಾರರಾಗಿದ್ದ ವೇಣೂರು ಸುಂದರ ಆಚಾರ್ಯ ಅವರ ಹಾಸ್ಯದಲ್ಲಿ ರಸವಿತ್ತೇ ಹೊರತು ಕಸವಿರಲಿಲ್ಲ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಯಂ. ಕೆ. ರಮೇಶ್ ಆಚಾರ್ಯ ತೀರ್ಥಹಳ್ಳಿ ಹೇಳಿದರು.ಅವರು ಜುಲೈ 10ರಂದು ವೇಣೂರಿನ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆದ ಹಾಸ್ಯಗಾರ ವೇಣೂರು ಸುಂದರ ಆಚಾರ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣೆ ಹಾಗೂ ಅಭಿನಂದನಾ ನುಡಿಗಳನ್ನಾಡಿದರು.ಅವರು ಶೇಣಿ ಗೋಪಾಲಕೃಷ್ಣ ಭಟ್ಟರು ಮೆಚ್ಚಿದ ಹಾಸ್ಯಗಾರರಾಗಿದ್ದರು. ಆಚಾರ್ಯ ಅವರು ದಿವಂಗತರಾದ ಮೇಲೆಯೂ ಅವರ ಸ್ಮರಣೆ ಎಲ್ಲರಲ್ಲಿದೆ. ಸಜ್ಜನರು ನಾಮ ಸ್ವರೂಪದಲ್ಲಿ ಇರುತ್ತಾರೆ ಎಂಬುದಕ್ಕೆ ಇವರು ಉದಾಹರಣೆಯಾಗಿ ನಿಲ್ಲುತ್ತಾರೆ. ಮಾನಸಿಕ ನಿರ್ಮಲತೆಯ ಸಂಭಾಷಣೆ ಅವರದ್ದಾಗಿತ್ತು. ಅವರು ಮರೆಯಲಾರದ, ಮರೆಯಬಾರದ ಸಮರ್ಥ ಕಲಾವಿದರಾಗಿದ್ದರು ಎಂದರು.ವೇಣೂರು ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮಾತನಾಡಿ, ವೇಣೂರು ಸುಂದರ ಆಚಾರ್ಯರದು ಯಕ್ಷಗಾನದ ದೊಡ್ಡ ಕ್ಷೇತ್ರ. ವರ್ಷಂಪ್ರತಿ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಬೇಕು ಎಂದು ಆಶಿಸಿದರು.ವೇಣೂರು ಭಾಸ್ಕರ ಆಚಾರ್ಯ ಮತ್ತು ವಾಮನ್ ಕುಮಾರ್ ವೇಣೂರು ಇವರಿಗೆ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ರಾವ್ ನುಡಿ ನಮನ ಸಮರ್ಪಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಪುರುಷೋತ್ತಮ ರಾವ್, ಉದ್ಯಮಿ ಭಾಸ್ಕರ ಪೈ, ಸಂಸ್ಮರಣಾ ಸಮಿತಿ ಅಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ, ಗೌರವಾಧ್ಯಕ್ಷ ರವೀಂದ್ರ ಆಚಾರ್ಯ, ಉಪಾಧ್ಯಕ್ಷ ಸದಾಶಿವ ಕುಲಾಲ್, ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ, ಖಜಾಂಚಿ ಸೀತಾರಾಮ ಆಚಾರ್ಯ, ಸಂಯೋಜಕ ಸದಾನಂದ ಯಸ್. ಆಚಾರ್ಯ, ಪ್ರೇಮಾವತಿ ಆಚಾರ್ಯ ಉಪಸ್ಥಿತರಿದ್ದರು.ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿದರು. ಪ್ರಭಾಕರ ಭಟ್ ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರಕಾಶ್ ಪುರೋಹಿತ ವಂದಿಸಿದರು. ಜಿ. ಎಸ್. ಪುರಂದರ ಪುರೋಹಿತ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಮೊದಲು ದಿವಾಕರ ಆಚಾರ್ಯ ಭಾಗವತಿಕೆಯಲ್ಲಿ ಕರ್ಣಾರ್ಜುನ, ನಂತರ ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ ವಾಲಿ ಮೋಕ್ಷ ತಾಳಮದ್ದಳೆ ನಡೆಯಿತು






