ಮೂಡುಬಿದಿರೆ: ಎನ್‌ಎಸ್‌ಯುಐ ಮುಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 2021-22ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ 100 ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಹಾಗೂ ಸಮ್ಮಾನ ಕಾರ್ಯಕ್ರಮವನ್ನು ಆಗಸ್ಟ್ 7ರಂದು ಪೂರ್ವಾಹ್ನ ಜೈನಕಾಶಿ-ವಿದ್ಯಾಕಾಶಿ ಮೂಡುಬಿದಿರೆಯ ಸಮಾಜಮಂದಿರ ಸಭಾಭವನದ ಸ್ವರ್ಣಮಂದಿರದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಜೈನಕಾಶಿ ಮೂಡುಬಿದಿರೆ ಇಂದು ಸರ್ವಶ್ರೇಷ್ಠ ಗುಣಮಟ್ಟದ ವಿದ್ಯಾಕೇಂದ್ರಗಳ ಗೊಂಚಲಾಗಿ ಮಾರ್ಪಟ್ಟಿದೆ. ದೇಶದ ಭವಿಷ್ಯದ ಶಕ್ತಿಯಾಗಿ ಯುವ ಪೀಳಿಗೆ ಹೊರಹೊಮ್ಮಬೇಕಾದರೆ ಕೆಎಎಸ್, ಐಎಎಸ್‌ನಂತಹ ಉನ್ನತ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವ ಗುರಿಯನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಎನ್ಎಸ್‌ಯುಐಯಂತಹ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆ ರಾಜಕೀಯವಾಗಿ ನನ್ನನ್ನು ಹಂತಹಂತವಾಗಿ ಎತ್ತರಕ್ಕೇರಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೌಹಾರ್ದತೆಯ ಅಭಿವೃದ್ಧಿಯ ಜಿಲ್ಲೆಯಾಗಿ ಬದಲಾಯಿಸಲು ಸಾಧ್ಯ. ಅಡೆತಡೆಗಳನ್ನು ಮೀರಿ ಸಾಧನೆ ಮಾಡುವ ಛಲ ಮತ್ತು ಬಂದಿರುವ ಕಷ್ಟಗಳನ್ನು ಬಂಡೆಯಂತೆ ಎದುರಿಸಿ ಸಾಧಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂದು ಹಾರೈಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಕ್ಷೇತ್ರಾಧ್ಯಕ್ಷ ಸೃಜನ್ ಜೆ. ಅಂಚನ್ ಮಟ್ಟು, ಉಪಾಧ್ಯಕ್ಷೆ ವಿಶಾಖಾ, ಪದಾಧಿಕಾರಿ ನಿವ್ಯಾ, ನಗರ ಕಾಂಗ್ರೆಸ್ ಅಧ್ಯಕ್ಷ ಪುರಂದರ ದೇವಾಡಿಗ, ಪುರಸಭಾ ಸದಸ್ಯ ಕೊರಗಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಪರಿಶಿಷ್ಟ ಘಟಕದ ಅಧ್ಯಕ್ಷ ವಿವೇಕಾನಂದ ಶಿರ್ತಾಡಿ ಉಪಸ್ಥಿತರಿದ್ದರು. ವಿಶಾಖಾ ಪುರಸ್ಕೃತರ ಪಟ್ಟಿ ವಾಚಿಸಿದರು.ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.






