ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜು

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜು
Facebook
Twitter
LinkedIn
WhatsApp

ಬೆಳ್ತಂಗಡಿ: ಹಿರಿಯರ ತ್ಯಾಗ ಬಲಿದಾನದ ಫಲಶ್ರುತಿಯಾಗಿ ಪಡೆದ ಸ್ವಾತಂತ್ರ್ಯದ ಅಮೃತೋತ್ಸವ ನಮ್ಮಅವಧಿಯಲ್ಲಿ ಆಚರಿಸುವ ಅವಕಾಶ ದೊರೆತದ್ದು ನಮ್ಮಲ್ಲರ ಸೌಭಾಗ್ಯವೇ ಸರಿ. ಆ ನಿಟ್ಟಿನಲ್ಲಿ ವಿವಿಧ ಸರಕಾರಿ ಇಲಾಖೆಗಳು ಮತ್ತು ಸೇವಾಸಂಸ್ಥೆಗಳ ಜೊತೆ ಸೇರಿಕೊಂಡು ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜುಗೊಂಡಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಹರೀಶ್ ಪೂಂಜ ವಿವರ ನೀಡಿದರು.ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 10ರಂದು ಗುರುವಾಯನಕೆರೆ ನವಶಕ್ತಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವು ಬಗೆಯ ವೈವಿದ್ಯಮಯವಿವಿದ ವಲಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಯಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಆಗಸ್ಟ್ 15ರಂದು ದೇಶದೆಲ್ಲೆಡೆ ನಡೆಯುವಂತೆ, ಬೆಳ್ತಂಗಡಿಯಲ್ಲೂ ನಡೆಯಲಿದ್ದು ಈ ಕಾರ್ಯಕ್ರಮ ಜನಮಾನಸದಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಮಾಡಲುತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದೇವೆ.ವರ್ಷಂಪ್ರತಿ ಜರಗುವಂತೆ ಪೂರ್ವಾಹ್ನ 9.00ಗಂಟೆಗೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಶಿಷ್ಟಾಚಾರದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆದು, ಬಳಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು 750 ದ್ವಿಚಕ್ರ ವಾಹನಗಳಲ್ಲಿ ಜಾಥಾ ಮೂಲಕ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನಕ್ಕೆ ತೆರಳಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ.ಖ್ಯಾತ ಚಿಂತಕರಾದ ಪ್ರಕಾಶ್ ಮಲ್ಪೆ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತು, ಸಾಧನಾ ಸಲಕರಣೆ ಮತ್ತು ಸೌಲಭ್ಯ ನೀಡಲಾಗುವುದು. ಕಂದಾಯ ಇಲಾಖೆಯಿಂದ 750 ಜನರಿಗೆ 94ಸಿ ಹಕ್ಕುಪತ್ರ, ಪಿಂಚಣಿ ಯೋಜನೆಯಲ್ಲಿ 750 ಜನರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ವಿತರಣೆ, ತಾಲೂಕು ಪಂಚಾಯತ್‌ ವತಿಯಿಂದ 75 ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, 75 ಅಂಗನವಾಡಿಗಳಿಗೆ ಗ್ರಾಮ ಪಂಚಾಯತ್ ನಿಧಿಯಿಂದ ತೂಕದ ಯಂತ್ರ ಹಾಗೂ ತಾಲೂಕು ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಪಶುಸಂಗೋಪನೆ ಇಲಾಖೆಯಿಂದ ಪುಣ್ಯಕೋಟಿ ಯೋಜನೆಗೆ ಚಾಲನೆ, ದನದ ಕೊಟ್ಟಿಗೆಗೆ 75 ಮ್ಯಾಟ್ ವಿತರಣೆ, 75 ಜಾನುವಾರುಗಳಿಗೆ ವಿಮಾ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾಲಯ ಉದ್ಘಾಟನೆ. ಶಿಕ್ಷಣ ಇಲಾಖೆಯಿಂದ 75 ಮಂದಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಟ್ಯಾಬ್‌ ವಿತರಣೆ ಹಾಗೂ ಅರಣ್ಯ ಇಲಾಖೆ ಸಹಯೋಗದಿಂದ ಶಾಲೆಗಳಿಗೆ 75 ಡೆಸ್ಕ್ ಬೆಂಚ್ ವಿತರಣೆ. ಕೃಷಿ ಇಲಾಖೆಯಿಂದ 75 ರೈತರಿಗೆ ತೋಟಗಾರಿಕಾ ಬೆಳೆಗಳ ಗಿಡ ವಿತರಣೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 75 ಮಂದಿಗೆ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ವಿತರಣೆ, ಅರಣ್ಯ ಇಲಾಖೆಯಿಂದ ಫಲಾನುಭವಿಗಳಿಗೆ 750 ರಕ್ತ ಚಂದನ, ಶ್ರೀಗಂಧ ಹಾಗೂ ಸಾಗುವಾನಿ ಗಿಡಗಳ ವಿತರಣೆ, ಟೀ ಪಾರ್ಕ್‌ನಲ್ಲಿ 75 ವಿವಿಧ ತಳಿಯ ಗಿಡ ನೆಡುವ ಕಾರ್ಯಕ್ರಮ, ಮೆಸ್ಕಾಂ ಇಲಾಖೆಯಿಂದ ಮೆಸ್ಕಾಂ ಬೆಳ್ತಂಗಡಿ ಹಾಗೂ ಉಜಿರೆ ಉಪವಿಭಾಗ ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘ ಬೆಳ್ತಂಗಡಿ ವತಿಯಿಂದ 75 ಅಂಗನವಾಡಿಗಳಿಗೆ ಫ್ಯಾನ್ ವಿತರಣೆ, ಸರ್ವೇ ಇಲಾಖೆಯಿಂದ 75 ಪೋಡಿ ಕಡತಗಳ ವಿಲೇವಾರಿ, ಪೊಲೀಸ್ ಇಲಾಖೆಯಿಂದ 23 ಹಾಸ್ಟೆಲ್‌ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಾಲೂಕಿಗೆ ಸಂಬಂಧಿಸಿದ ಪುಸ್ತಕಗಳ ವಿತರಣೆ, ಕಾರ್ಮಿಕ ಇಲಾಖೆಯಿಂದ 75 ಜನ ವಿವಿಧ ಕಾರ್ಮಿಕ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ, ವಿಕಲಚೇತನ ಕಲ್ಯಾಣ ಇಲಾಖೆಯಿಂದ 75 ಜನ ವಿಶೇಷ ಚೇತನರಿಗೆ ಯು.ಡಿ.ಐ.ಡಿ. ಕಾರ್ಡ್ ವಿತರಣೆ, ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಸ್ವ ಉದ್ಯೋಗಾಸಕ್ತ 75 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ತಾಲೂಕು ವೈನ್ ಮರ್ಚೆಂಟ್ ಅಸೋಸಿಯೇಸನ್ ಸಹಯೋಗದೊಂದಿಗೆ 75 ಕೃಷಿಕರಿಗೆ ಕಳೆಕೊಚ್ಚುವ ಯಂತ್ರ ವಿತರಣೆ, ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರ ಭಕ್ತಿಯನ್ನು ಉದ್ದೀಪನಗೊಳಿಸುವ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಕೇಂದ್ರ ಸ್ಥಾನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲದೇ ತಾಲೂಕಿನ 48 ಗ್ರಾಮ ಪಂಚಾಯತ್‌ಗಳಲ್ಲೂ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಊರ ಹಿರಿಯರು ಮಾಜಿ ಸೈನಿಕರನ್ನು ಒಗ್ಗೂಡಿಸಿ ಸ್ಥಳೀಯ ಮಟ್ಟದಲ್ಲಿ 75 ಫಲಾನುಭವಿಗಳಿಗೆ ಸಾಧನ ಸಲಕರಣೆ, ಸವಲತ್ತು, ಸೌಲಭ್ಯ ವಿತರಿಸಲಾಗುವುದು. ಈಗಾಗಲೇ ಕೇಂದ್ರ ಸರಕಾರದ ಸೂಚನೆ ಪ್ರಕಾರ ಆಗಸ್ಟ್ 13ರ ಪೂರ್ವಾಹ್ನ 8.00 ಗಂಟೆಯಿಂದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ ಹಾಗೂ ಆಗಸ್ಟ್ 15ರ ಸಂಜೆ 5.00ಕ್ಕೆ ಗೌರವಯುತವಾಗಿ ಧ್ವಜಾವರೋಹಣ ನಡೆಯುವ ‘ಹರ್ ಘರ್ ತಿರಂಗ ಅಭಿಯಾನ’ ಮನೆ ಮನೆಗಳಿಗೂ ತಲುಪಿದ್ದು, ನಮ್ಮ ನಾಡಿನ ಈ ಸಾಂಸ್ಕೃತಿಕ ಉತ್ಸವ ನಾವೆಲ್ಲರೂ ಒಗ್ಗೂಡಿ ಆಚರಿಸುವ ಯಶಸ್ವಿಗೊಳಿಸುವ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಸಂದೇಶವನ್ನು ಜಗತ್ತಿಗೆ ಸಾರುವ, ತಾಯಿ ಭಾರತಿಗೆ ಅಮೃತದ ಗೌರವ ನೀಡೋಣ ಎಂದು ಶಾಸಕರು ವಿನಂತಿಸಿದರು.ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಕಾರ್ಯಕ್ರಮದಲ್ಲಿ ತಾಲೂಕಿನ ಮೂವರು ಮಾಜಿ ಶಾಸಕರುಗಳಾದ ಕೆ. ಗಂಗಾಧರ ಗೌಡ, ವಸಂತ ಬಂಗೇರ ಮತ್ತು ಪ್ರಭಾಕರ ಬಂಗೇರ ಅವರನ್ನು ಸಮ್ಮಾನಿಸಲು ತೀರ್ಮಾನಿಸಲಾಗಿದೆ. ನಾಳೆಯೇ ಅವರನ್ನು ಸಂಪರ್ಕಿಸುವ ಕಾರ್ಯ ನಡೆಯಲಿದೆ ಎಂದು ಹರೀಶ್ ಪೂಂಜ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ., ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ವಿಸ್ತರಣಾಧಿಕಾರಿ ಜೋಸೆಫ್,‌ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜು ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Latest 5

Related Posts