ಮೂಡುಬಿದಿರೆ: ‘ಯಾವುದೇ ವ್ಯಕ್ತಿಯು ತನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆಯನ್ನು ಪಡೆದು ಸಂತೃಪ್ತಿ ಹೊಂದಿದರೆ ಅದುವೇ ನಿಜವಾದ ಸಾಧನೆ’ ಎಂದು ಮೂಡುಬಿದಿರೆಯ ಹಿರಿಯ ಉದ್ಯಮಿ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್‌ನ ಮಾಲಕ ಕೆ. ಶ್ರೀಪತಿ ಭಟ್ ನುಡಿದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ ವತಿಯಿಂದ ಆಗಸ್ಟ್ 19ರಂದು ನಡೆದ ವಿಶ್ವ ಛಾಯಾಗ್ರಹಣ ದಿನದಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಯೋಜಿಸಿದ ಹಿರಿಯ ಛಾಯಾಗ್ರಾಹಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಹಿರಿಯ ಛಾಯಾಗ್ರಾಹಕರಾದ ಅಭಯಕುಮಾರ್ ಜೈನ್ ವೇಣೂರು ಹಾಗೂ ಉದಯಕುಮಾರ್ ಎಂ. ದಂಪತಿಗಳು ಇರುವೈಲು ಅವರನ್ನು ವಲಯದ ವತಿಯಿಂದ ಸಮ್ಮಾನಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಶ ರವಿ ಕೋಟ್ಯಾನ್ ಹಾಗೂ ದಶಮಾನೋತ್ಸವ ವರ್ಷದ ಸಂಚಾಲಕ ವಿಲ್ಫ್ರೆಡ್ ಮೆಂಡೊನ್ಸಾ ಸಮ್ಮಾನ ಪತ್ರ ವಾಚಿಸಿದರು. ಇನ್ನೋರ್ವ ಮುಖ್ಯ ಅತಿಥಿ ಎಸ್.ಕೆ.ಪಿ.ಎ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಇವರು ಮಾತನಾಡಿ, ವಿಶ್ವ ಛಾಯಾಗ್ರಹಣ ದಿನದ ಹಿನ್ನೆಲೆ ಮತ್ತು ಮಹತ್ವ ವಿವರಿಸಿದರು. ಹಾಗೂ ಸಮ್ಮಾನಿತರನ್ನು ಅಭಿನಂದಿಸಿದರು.ಸದಸ್ಯರಾದ ಸಂತೋಷ್ ರಾವ್ ಇವರು ಪ್ರಾರ್ಥನೆ ಸಲ್ಲಿಸಿದರು. ವಲಯ ಅಧ್ಯಕ್ಷರಾದ ಸುನಿಲ್ ಕೋಟ್ಯಾನ್ ಸ್ವಾಗತಿಸಿದರು. ವಲಯದ ಗೌರವಾಧ್ಯಕ್ಷರಾದ ಭಾನುಪ್ರಕಾಶ್ ರಾವ್ ಹಾಗೂ ಕೋಶಾಧಿಕಾರಿಯದ ಸತೀಶ್ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಇಕ್ಬಾಲ್ ಶೇಕ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ರಾಜೇಶ್ ಅಮೀನ್ ವಂದಿಸಿದರು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಹಿರಿಯ ಛಾಯಾಗ್ರಾಹಕರಿಗೆ ಸಮ್ಮಾನ ಕಾರ್ಯಕ್ರಮದ ಜೊತೆಗೆ ರಕ್ತದಾನ ಶಿಬಿರವನ್ನು ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮುಂದಿನ ದಿನಗಳಲ್ಲಿ ರಕ್ತದ ಕೊರತೆ ಇದ್ದಾಗ ಛಾಯಾಗ್ರಾಹಕರ ಸಂಘಟನೆಯನ್ನು ಸಂಪರ್ಕಿಸಲು ಕೋರಲಾಯಿತು. ವಿಲ್ಫ್ರೆಡ್ ಮೆಂಡೊನ್ಸಾ ಕಾರ್ಯಕ್ರಮಕ್ಕೆ ಸಹಕರಿಸಿದರು.






