ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 24ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು; ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 23ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಭಜನಾ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಈ ಬಾರಿಯ ಭಜನಾ ತರಬೇತಿ ಶಿಬಿರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು, , ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೆಳಗಾವಿ, ಮಂಡ್ಯ ಜಿಲ್ಲೆಗಳ ಆಯ್ದ ಭಜನಾ ಮಂಡಳಿಗಳ 200ಮಂದಿ ಪುರುಷ ಮತ್ತು 50ಮಂದಿ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದ್ದು, ಇವರುಗಳಿಗೆ ಪರಿಣತ ಭಜನಾ ತರಬೇತುದಾರರಿಂದ ತರಬೇತಿ ನೀಡಲಾಗುವುದು. ತರಬೇತಿ ಶಿಬಿರದಲ್ಲಿ ದಾಸ ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿ, ಅವುಗಳನ್ನು ಭಜನಾ ರೂಪದಲ್ಲಿ ಹೇಳಿಕೊಡಲಾಗುತ್ತದೆ. ಇದರೊಂದಿಗೆ ಪ್ರಾರ್ಥನಾ ಹಾಡುಗಳು ಮತ್ತು ವಚನ ಸಾಹಿತ್ಯಗಳ ತರಬೇತಿಯನ್ನೂ ನೀಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಶೋಭಾನೆ ಹಾಡುಗಳನ್ನು ಹೇಳಿ ಕೊಡಲಾಗುತ್ತದೆ. ನೃತ್ಯ ಭಜನಾ ಪರಿಣತರಿಂದ ನೃತ್ಯ ಭಜನೆ ಹೇಳಿ ಕೊಡಲಾಗುತ್ತದೆ. ಶಿಬಿರದಲ್ಲಿ ಯೋಗಾಭ್ಯಾಸ ಹಾಗೂ ಪ್ರಾಣಾಯಾಮ ಧ್ಯಾನ ತರಗತಿಗಳಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ವಿಷಯಗಳ ತಜ್ಞರಿಂದ ಪ್ರತಿದಿನ ಒಂದು ಗಂಟೆಯ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.ಅರ್ಹತೆ: ತರಬೇತಿಯಲ್ಲಿ ಭಜನಾ ಮಂಡಳಿಯ ಸದಸ್ಯರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಓದಲು ಹಾಗೂ ಬರೆಯಲು ತಿಳಿದಿರಬೇಕು. 18ರಿಂದ 45ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಠ ರಾಗ ಹಾಗೂ ತಾಳದ ಜ್ಞಾನ ಹೊಂದಿರಬೇಕು. ಒಂದು ಭಜನಾ ಮಂಡಳಿಯಿಂದ ಇಬ್ಬರಿಗೆ ಭಾಗವಹಿಸಲು ಅವಕಾಶವಿದೆ. ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನ ಸುಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.ನೋಂದಾವಣೆ ಮಾಡಿಕೊಳ್ಳಲು ಇಚ್ಛಿಸುವವರು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿಯನ್ನು ಸಂಪರ್ಕಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಶ್ರೀ ಸುಬ್ರಹ್ಮಣ್ಯ ಪ್ರಸಾದ್ (9448869340) ಸಂಯೋಜಕರು; ಶ್ರೀ ಸುರೇಶ್ ಮೊಯ್ಲಿ (9945922849) ಕಾರ್ಯದರ್ಶಿ; ಧರ್ಣಪ್ಪ ಡಿ. (9449663417) ಕೋಶಾಧಿಕಾರಿ, ಭಜನಾ ಕಮ್ಮಟ-2022, ಶ್ರೀ ಕ್ಷೇತ್ರ ಧರ್ಮಸ್ಥಳ ಇವರನ್ನು ಸಂಪರ್ಕಿಸಬಹುದಾಗಿದೆ.





