ಮೂಡುಬಿದಿರೆ: ಸಾರ್ವಜನಿಕರು ಒಗ್ಗೂಡಿ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಿಂದ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿ ನೆಲೆಸಲಿ ಎಂದು ಮೂಡುಬಿದಿರೆ ಸಮಾಜಮಂದಿರ ಸಭಾದ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನುಡಿದರು.ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ಪ್ರಾರಂಭಗೊಂಡಿರುವ 59ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಉದ್ಘಾಟನಾ ಸಮಾರಂಬದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯೋತ್ಸವದ ಚಳವಳಿಯಲ್ಲಿ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರೆ, ಮೂಡುಬಿದಿರೆಯಲ್ಲಿ ಗಣೇಶೋತ್ಸವದ ರೂವಾರಿ ಅಮರನಾಥ ಶೆಟ್ಟಿಯವರು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ದಶಕಗಳ ಕಾಲ ಕಟ್ಟಿ, ಬೆಳೆಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಮೆಚ್ಚಿದ ನಾಯಕರಾಗಿ ಮೆರೆದರು ಎಂದು ಅವರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಅವರು ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಎಂಬುದು ರಾಷ್ಟ್ರೀಯ ಭಾವೈಕ್ಯತೆಯ ಹಬ್ಬ. ಜಾತಿ-ಧರ್ಮದ ಹೆಸರಿನಲ್ಲಿ ಕಿತ್ತಾಟ ನಡೆಯುವುದನ್ನು ತಡೆಯಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದರು ಎಂದರು.ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ರ ಅಧ್ಯಕ್ಷತೆಯಲ್ಲಿ, ಚೌಟರ ಅರಮನೆಯ ಕುಲದೀಪ್ ಎಂ. ಅವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಶ್ರೀ ಅಮರನಾಥ ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ., ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಆಲಂಗಾರು ಈಶ್ವರ ಭಟ್ ಉಪಸ್ಥಿತರಿದ್ದರು. ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ ಭಗವಾಧ್ವಜ ಅರಳಿಸಿದರು. ರಾಜೇಶ್ ಶೆಟ್ಟಿ ವಂದೇ ಮಾತರಂ ಹಾಡಿದರು. ಆಲಂಗಾರು ಸುಬ್ರಹ್ಮಣ್ಯ ಭಟ್ ಪ್ರಾರ್ಥಿಸಿದರು.






