ಬೆಳ್ತಂಗಡಿ: ಸಂಘವು 2021-22 ಸಾಲಿನಲ್ಲಿ ರೂ.3.29 ಕೋಟಿಗಿಂತ ಅಧಿಕ ಲಾಭಗಳಿಸಿದ್ದು ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಗಿದೆ. ಆಡಳಿತ ಮಂಡಳಿ ಅಪೇಕ್ಷೆ ಮೇರೆಗೆ ಇದರಲ್ಲಿ 2% ಭಾಗವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಮಹಾಸಭೆಯಲ್ಲಿ ಸದಸ್ಯರು ಒಪ್ಪಿಗೆ ನೀಡಿದ್ದು, ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹೇಳಿದರು.ಅವರು ಕೊಲ್ಲಿ ಶ್ರೀ ದುರ್ಗಾದೇವಿ ಕಲಾಮಂದಿರದಲ್ಲಿ ಸೆಪ್ಟೆಂಬರ್ 3ರಂದು ಜರಗಿದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಸದಸ್ಯರು ಹಾಗೂ ಗ್ರಾಹಕರಿಗೆ ಸೇವೆ ಸಲ್ಲಿಸುವುದು ಸಂಘದ ಮುಖ್ಯ ಉದ್ದೇಶ. ಕಳೆದ ಸಾಲಿಗೆ ತುಲನೆ ಮಾಡಿದಾಗ ಸಂಘವು 12.7%ರಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ವರದಿ ವರ್ಷದಲ್ಲಿ 777.10 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಆದಾಯದಲ್ಲಿ 22.14% ಪ್ರಗತಿ ಸಾಧಿಸಲಾಗಿದೆ. ಬಂಗಾಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಘವು ಕನ್ಯಾಡಿ, ಕಡಿರುದ್ಯಾವರ, ದಿಡುಪೆ, ನಾವೂರು, ಕಿಲ್ಲೂರು, ಇಂದಬೆಟ್ಟು ಹಾಗೂ ಮಿತ್ತಬಾಗಿಲಿನಲ್ಲಿ ಶಾಖೆಗಳನ್ನು ಹೊಂದಿದೆ.13,343 ಸದಸ್ಯರನ್ನು ಹೊಂದಿದ್ದು 6.29 ಕೋಟಿ ರೂಪಾಯಿ ಪಾಲುಬಂಡವಾಳ, 93 ಕೋಟಿ ರೂಪಾಯಿಗಿಂತ ಅಧಿಕ ಠೇವಣಿ,134 ಕೋಟಿ ರೂಪಾಯಿಗಿಂತ ಅಧಿಕ ಸಾಲ ವಿತರಣೆಯನ್ನು ವರದಿ ವರ್ಷದಲ್ಲಿ ಮಾಡಲಾಗಿದೆ.143 ಕೋಟಿ ರೂಪಾಯಿ ದುಡಿಯುವ ಬಂಡವಾಳದೊಂದಿಗೆ ವ್ಯವಹಾರ ನಡೆಸಿದೆ.ರಬ್ಬರ್ ಖರೀದಿ, ಅಡಕೆ ಖರೀದಿ, ರಸಗೊಬ್ಬರ ಮಾರಾಟ, ಸೇಫ್ ಲಾಕರ್ ಸೌಲಭ್ಯ, ಆರ್‌ಟಿಜಿಎಸ್, ನೆಫ್ಟ್, ಇ- ಸ್ಟ್ಯಾಂಪ್, ಪಹಣಿ ಪತ್ರ ನೀಡಿಕೆ ಮೊದಲಾದ ನಾನಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ.ಕೇಂದ್ರ ಸರಕಾರದ ಯೋಜನೆಯಡಿ ಕಡಿರುದ್ಯಾವರ ಹಾಗೂ ಕನ್ಯಾಡಿಯ ಪಡ್ಪು ಎಂಬಲ್ಲಿ ಕಟ್ಟಡ ನಿರ್ಮಿಸಲು ನಬಾರ್ಡಿನಿಂದ 3%ದರದಲ್ಲಿ ಸಾಲ ಮಂಜೂರಾಗಿದ್ದು, ಕಡಿರುದ್ಯಾವರ ಕಟ್ಟಡದ ಕಾಮಗಾರಿ ಟೆಂಡರ್ ಅಂತಿಮವಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕನ್ಯಾಡಿಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪೂರ್ಣವಾದ ಕೂಡಲೆ ಕಾರಮಗಾರಿ ಆರಂಭವಾಗಲಿದೆ. ಮುಖ್ಯ ಕಚೇರಿ ಹಾಗೂ ಎಲ್ಲಾ ಶಾಖೆಗಳನ್ನು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹರೀಶ್ ಸಾಲಿಯಾನ್ ಸಂಘದ ಸಾಧನೆಗಳನ್ನು ವಿವರಿಸಿದರು.ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಪ್ಯಾಕ್ಸ್ ಪದಾಧಿಕಾರಿಗಳು, ರಾಯಚೂರು ಜಿಲ್ಲೆಯ ಫ್ಯಾಕ್ಸ್ ಗಳ ಅಧ್ಯಕ್ಷರು ಹಾಗೂ ನಿರ್ದೇಶಕರ ತಂಡ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ ಪ್ಯಾಕ್ಸ್ ಅಧ್ಯಕ್ಷರ ಹಾಗೂ ಅಧಿಕಾರಿಗಳ ತಂಡ, ರಾಜ್ಯದ ಬೆಂಗಳೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ತಂಡ, ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ, ತಮಿಳುನಾಡು ರಾಜ್ಯದ ಡಿಸಿಸಿ ಬ್ಯಾಂಕಿನ ಅಧಿಕಾರಿಗಳ ತಂಡ ಸಂಘಕ್ಕೆ ಭೇಟಿ ನೀಡಿ ಸಂಘದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಪಡೆದಿದೆ.2021-22ನೇ ಸಾಲಿನ ಅತ್ಯುತ್ತಮ ಕಾರ್ಯವೈಖರಿ ಹಾಗೂ ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಪ್ಯಾಕ್ಸ್‌ಗಳಿಗೆ ನೀಡುವ ಪ್ರಥಮ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘವು ಲೆಕ್ಕ ಪರಿಶೋಧನೆಯಲ್ಲಿ ಕಳೆದ 12 ವರ್ಷಗಳಿಗೆ ಸತತವಾಗಿ ಎ ದರ್ಜೆ ಪಡೆಯುತ್ತಿದೆ. ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಸಾಲ, ಸೌಹಾರ್ದ ಕ್ರೆಡಿಟ್ ಕಾರ್ಡ್ ಯೋಜನೆ, ಗ್ರಾಹಕ ವಸ್ತು ಸಾಲ, ವಾಹನ ಸಾಲ ಇತ್ಯಾದಿಗಳನ್ನು ಸದಸ್ಯರಿಗೆ ವಿತರಿಸುತ್ತಿದ್ದು ಸತತ 28 ವರ್ಷಗಳಿಂದ ಲಾಭವನ್ನು ಗಳಿಸುತ್ತಿದೆ.ಉಪಾಧ್ಯಕ್ಷ ವಸಂತ ಗೌಡ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.ಸಿಬ್ಬಂದಿ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಿನಯಚಂದ್ರ ವಂದಿಸಿದರು.ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದಸಂಘದ ವ್ಯಾಪ್ತಿಯ ಗ್ರಾಮಗಳ 223ವಿದ್ಯಾರ್ಥಿಗಳನ್ನು,10ಹಾಲು ಉತ್ಪಾದಕ ಸಂಘಗಳನ್ನು, 18 ನವೋದಯ ಸ್ವಸಹಾಯ ಸಂಘಗಳನ್ನು ಅಭಿನಂದಿಸಲಾಯಿತು.






