ಯುವ ತೇಜಸ್ಸು ಟ್ರಸ್ಟ್‌ನಿಂದ ಮಾದರಿ ಕಾರ್ಯದೇಣಿಗೆಯಿಂದ ನಿರ್ಮಿಸಿದ ಕಿರುಸೇತುವೆ ಲೋಕಾರ್ಪಣೆ

ಯುವ ತೇಜಸ್ಸು ಟ್ರಸ್ಟ್‌ನಿಂದ ಮಾದರಿ ಕಾರ್ಯದೇಣಿಗೆಯಿಂದ ನಿರ್ಮಿಸಿದ ಕಿರುಸೇತುವೆ ಲೋಕಾರ್ಪಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಯುವ ತೇಜಸ್ಸು ಟ್ರಸ್ಟ್‌ನ ಯುವ ಸದಸ್ಯರು ಮಾಡುತ್ತಿರುವ ಸಮಾಜ ಸೇವಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.  ಯುವಕರ ತಂಡವನ್ನು ಕಟ್ಟುವಾಗ ಪ್ರತಿ ಸದಸ್ಯನೂ  ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದರೆ ಯಾವುದೇ  ಸಮಸ್ಯೆಗಳು ಎದುರಾಗುವುದಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ತಂಡಗಳು ರಚನೆಗೊಂಡರೆ ಗ್ರಾಮಗ್ರಾಮಗಳಲ್ಲಿ ಅಭಿವೃದ್ಧಿ ಕಾಣಬಹುದು. ಯುವಜನತೆ ದಾರಿತಪ್ಪುತ್ತಿರುವ ಇಂದಿನ ದಿನಗಳಲ್ಲಿ ತಂಡದ ಯುವಕರು ಇತರರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗುವ  ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಹೇಳಿದರು.ಅವರು ಅಕ್ಟೋಬರ್ 3ರಂದು  ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಲ್ಲಂಡ ಎಂಬಲ್ಲಿ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ  ಕಬ್ಬಿಣದ ಕಿರುಸೇತುವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಯುವ ತೇಜಸ್ಸು ತಂಡದ ಸದಸ್ಯ ಆಶಿತ್ ಕಲ್ಲಾಜೆ ಮಾತನಾಡಿ, 7 ವರ್ಷಗಳ ಹಿಂದೆ ವಾಟ್ಸಾಪ್ ಗ್ರೂಪ್ ಮೂಲಕ ನಿರ್ಮಾಣಗೊಂಡ ತಂಡದಲ್ಲಿ ಯಾವುದೇ ಪದಾಧಿಕಾರಿಗಳು ಇಲ್ಲ. ಇಲ್ಲಿ ಎಲ್ಲ ಸದಸ್ಯರೂ  ಜವಾಬ್ದಾರಿಯಿಂದ  ದುಡಿಯುತ್ತಿದ್ದೇವೆ. ಸಾಮಾಜಿಕ ಕಳಕಳಿಯ ಧ್ಯೇಯದೊಂದಿಗೆ ಯುವಜನರು ಒಟ್ಟಾಗಿ  ಸಾರ್ವಜನಿಕರ ಕಷ್ಟದ  ಸಂದರ್ಭಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ದಾನಿಗಳಿಂದಲೇ ಸಂಗ್ರಹಿಸಿದ ಮೊತ್ತದಿಂದ ಜಿಲ್ಲೆಯ ನಾನಾ ಕಡೆ 45 ಲಕ್ಷ ರೂಪಾಯಿಗಿಂತ ಅಧಿಕ ವೆಚ್ಚದ ಸಾಮಾಜಿಕ ಕಳಕಳಿಯ ಕೆಲಸಗಳನ್ನು ತಂಡದ ಮೂಲಕ ಮಾಡಲಾಗಿದೆ. ದಾನಿಗಳು ನೀಡುವ ಧನ ಸಹಾಯದಿಂದ ನಾವು ಸಮಾಜಕ್ಕೆ ಸಹಕರಿಸುವಂತಾಗಿದೆ ಎಂದರು.ಮಿತ್ತಬಾಗಿಲು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಲತಾ ಹರೀಶ್, ಸದಸ್ಯರಾದ ರಾಮಣ್ಣ ಕುಂಬಾರ, ಮೋಹಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ, ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷ  ವಿನಾಯಕರಾವ್ ಕನ್ಯಾಡಿ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಪಾಟಾಳಿ, ಮಾಜಿ ಸದಸ್ಯ ಜೋಸೆಫ್, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವರಾವ್ ಕಕ್ಕೆನೇಜಿ, ಬಾಲಕೃಷ್ಣ ಕಾನರ್ಪ ಮತ್ತಿತರರು ಉಪಸ್ಥಿತರಿದ್ದರು.ಕೇಶವ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಕಾರ್ಯಕ್ರಮ ನಿರೂಪಿಸಿದರು.ಕಲ್ಲಂಡ ಪ್ರದೇಶದಲ್ಲಿ ಸೇತುವೆ ಇಲ್ಲದೆ ಇಲ್ಲಿನ ಗುತ್ತು, ಕಡ್ತಿಕುಮೇರು, ಕಕ್ಕೆನೇಜಿ, ಮಕ್ಕಿ, ಪರ್ಲ ಮೊದಲಾದ ಪ್ರದೇಶದ 28 ಕುಟುಂಬಗಳಿಗೆ ಹಾಗೂಜನಾಕರ್ಷಕ ಎರ್ಮಾಯಿ ಜಲಪಾತಕ್ಕೆ ಹೋಗಬೇಕಾದರೆ ನೇತ್ರಾವತಿ ನದಿ ಸಂಪರ್ಕದ ಏಳೂವರೆ ಹಳ್ಳಕ್ಕೆ ಮರದ ಕಾಲು ಸಂಕವೇ ಆಧಾರವಾಗಿತ್ತು. ಇದರಿಂದ ಇಲ್ಲಿನ ಜನರು ಸಾಕಷ್ಟು ತೊಂದರೆ  ಅನುಭವಿಸುತ್ತಿದ್ದರು. ಇಲ್ಲಿನ ನಾಗರಿಕರ ವಿನಂತಿಯ  ಮೇರೆಗೆ ಯುವತೇಜಸ್ಸು ತಂಡ ದ್ವಿಚಕ್ರ ವಾಹನ ಸಂಚಾರ ಸಾಮರ್ಥ್ಯದ ಕಬ್ಬಿಣದ ಕಿರು ಸೇತುವೆಯನ್ನು ನಿರ್ಮಿಸಿಕೊಟ್ಟಿದೆ. ಇದು ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲ ಒದಗಿಸಿದೆ.

Latest 5

Related Posts