ಉಜಿರೆ ಗ್ರಾಮಸಭೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಗ್ರಾಮಸ್ಥರ ಆಗ್ರಹ

ಉಜಿರೆ ಗ್ರಾಮಸಭೆ                                                       ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಗ್ರಾಮಸ್ಥರ ಆಗ್ರಹ
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್‌ನ 2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಕ್ಟೋಬರ್ 11ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೆರಿಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ| ಯತೀಶ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖಾ ಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಮತ್ತು ಉಜಿರೆಯ ನಾಗರಿಕರು ಭಾಗವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಜಯಂತ್ ಯು. ಬಿ. ಕಳೆದ ಸಭೆಯ ನಡಾವಳಿಗಳ ಅನುಪಾಲನಾ ವರದಿ ಮಂಡಿಸಿದರು. ಸಿಬ್ಬಂದಿ ರಮೇಶ್ ವಾರ್ಡ್ ಸಭೆಗಳಲ್ಲಿ ಬಂದ ಪ್ರಸ್ತಾವನೆಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.  ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ನಗರವಾಗಿ ಬೆಳೆಯುತ್ತಿರುವ ಉಜಿರೆ ಗ್ರಾಮದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2021ರಲ್ಲಿ ಜನಗಣತಿ ಆಗಿರುವುದಿಲ್ಲ. ಆದರೂ ಉಜಿರೆ ಪಟ್ಟಣ ಪಂಚಾಯತ್ ಆಗಿ ಅಭಿವೃದ್ಧಿ ಹೊಂದಲು ಎಲ್ಲ ಅರ್ಹತೆ ಪಡೆದಿದೆ. ಸಾರ್ವಜನಿಕರಿಗೆ ಹೆಚ್ಚಿನ ಸರಕಾರಿ ಸೌಲಭ್ಯ ದೊರೆಯುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಆಗಬೇಕೆಂಬ ಪ್ರವೀಣ್ ಅವರ ಸಲಹೆಗೆ ಗ್ರಾಮಸ್ಥರ ಬೆಂಬಲ ದೊರೆತು ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.  ಗ್ರಾಮದ 254 ನಿವೇಶನರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇದೀಗ 14 ಹೊಸ  ಅರ್ಜಿಗಳು ಬಂದಿವೆ. 73 ಅರ್ಜಿಗಳಿಗೆ ನಿವೇಶನ ಮಂಜೂರಾಗಿದ್ದು, 10 ಅರ್ಜಿಗಳು ವಿವಿಧ ತಾಂತ್ರಿಕ ತೊಂದರೆಗಳಿಂದ ತಡೆಹಿಡಿಯಲ್ಪಟ್ಟಿವೆ. 146 ವಸತಿರಹಿತರ ಪೈಕಿ 50 ಜನರಿಗೆ ವಸತಿ ಮಂಜೂರಾಗಿದ್ದು, ಇನ್ನೂ 3500 ಹೆಚ್ಚುವರಿ ಮನೆಗಳಿಗೆ ಶಾಸಕರು ಮಂಜೂರಾತಿ ದೊರಕಿಸುವ ನಿರೀಕ್ಷೆಯಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದರು. .        ರಸ್ತೆಬದಿ ಅನಧಿಕೃತ ಬ್ಯಾನರ್, ಜಾಹಿರಾತು ಫಲಕ ಹಾಕಿರುವುದನ್ನು ತೆರವುಗೊಳಿಸಬೇಕೆಂಬ ಸಲಹೆಗೆ ಆ ಕುರಿತು ಸಭೆಯಲ್ಲಿ ನಿರ್ಣಯಕೈಗೊಂಡರೆ ತೆಗೆಸಬಹುದೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದರು. ನಾವು ವ್ಯಾಪಾರಸ್ಥರು ಅಂಗಡಿಯೆದುರು ಹಾಕಿದ ಬೋರ್ಡ್ ತೆಗೆಸಲು ಸಾಧ್ಯವಿಲ್ಲ ಎಂದು ಪ್ರವೀಣ್ ಉತ್ತರಿಸಿದರು. ತೆರಿಗೆ ಪಾವತಿ ಬಾಕಿಯಿರುವವರಿಗೆ ತಗಾದೆ ನೋಟಿಸ್ ಕಳುಹಿಸದೆ ದಂಡ ವಿಧಿಸುವುದು ಸರಿಯಲ್ಲ ಎಂಬ ಬಾಲಸುಬ್ರಹ್ಮಣ್ಯ ಅವರ ಪ್ರಶ್ನೆಗೆ ತೆರಿಗೆ ಬಾಕಿಯಿರುವವರ ಮಾಹಿತಿಯನ್ನು ಪಂಚಾಯತ್ ನಲ್ಲಿ ಪ್ರಕಟಿಸುತ್ತೇವೆ  ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಪಷ್ಟೀಕರಿಸಿದರು. ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಗಾಂಧಿನಗರ ವಾರ್ಡ್ ಸದಸ್ಯರು ವಾರ್ಡಿನ ಯಾವುದೇ ಸಮಸ್ಯೆಗೆ ಸ್ಪಂದಿಸಿ ಪರಿಹಾರಕ್ಕೆ ಬಾರದೆ ಗ್ರಾಮ ಸಭೆಗೆ ಮಾತ್ರ ಬಂದರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಾರದೇಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.           ಅಭಿನಂದನೆ: ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಮಿತಿ ಅಧ್ಯಕ್ಷರು ಹಾಗು ಸರ್ವ ಸದಸ್ಯರಿಗೆ ಪಂಚಾಯತ್ ಪರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃತಜ್ಞತೆ ಸಲ್ಲಿಸಿದರು. ಅಮೃತ ಯೋಜನೆಗೆ  ಆಯ್ಕೆಯಾದ ಪಂಚಾಯತ್‌ಗೆ ರೂಪಾಯಿ 25 ಲಕ್ಷ ಹೆಚ್ಚುವರಿ ಅನುದಾನ ಮಂಜೂರುಗೊಳಿಸಿದ ಶಾಸಕ ಹರೀಶ್ ಪೂಂಜಾ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕುಡಿಯುವ ನೀರು ಸರಬರಾಜಿನ 90%ಕ್ಕಿಂತ ಹೆಚ್ಚು ನೀರು ಶುಲ್ಕ ಹಾಗೂ ಮನೆ ತೆರಿಗೆ ವಸೂಲಾತಿಗೆ ಶ್ರಮಿಸಿದ ಪಂಚಾಯತ್ ಸಿಬ್ಬಂದಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯತ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ  ತೊಡಗಿಸಿಕೊಳ್ಳುತ್ತಿರುವ  ಉಜಿರೆ ವರ್ತಕರ ಸಂಘದ ಸಹಕಾರಕ್ಕೆ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಅವರನ್ನು ಗುರುತಿಸಿ ಗೌರವಿಸಲಾಯಿತು.  ಉಜಿರೆ ದ್ವಾರದಿಂದ ಬೆಳಾಲು ಕ್ರಾಸ್‌ವರೆಗೆ ರಸ್ತೆಯ ಎರಡೂ  ಬದಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ವ್ಯಾಪಾರ ಹಾಗೂ ಸಂಚಾರಕ್ಕೆ ತೊಂದರೆ ಯಾಗುತ್ತಿದೆ ಎಂಬ ಜಗದೀಶ್ ಪ್ರಸಾದ್ ಅವರ ಆಕ್ಷೇಪಣೆಗೆ  ನೋ ಪಾರ್ಕಿಂಗ್ ಬಗ್ಗೆ ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ವರ್ತಕರ ಸಂಘದ ನೇತೃತ್ವದಲ್ಲಿ ಈ ತಿಂಗಳಲ್ಲಿ ಪ್ರತ್ಯೇಕ ಸಮನ್ವಯ ಸಭೆ ನಡೆಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಉಜಿರೆಯ ಬಸ್‌ನಿಲ್ದಾಣದ ಬಳಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸದಸ್ಯೆ ಉಷಾಕಿರಣ್ ಕಾರಂತ್ ಸಲಹೆ ನೀಡಿದರು. ಮೆಸ್ಕಾಂ ಸಬ್ ಸ್ಟೇಷನ್‌ಗೆ ನಿನ್ನಿಕಲ್ಲು ಬಳಿ  ಸ್ಥಳ ಗುರುತಿಸಲಾಗಿದ್ದು ಅಲ್ಲಿ 200ಕ್ಕಿಂತ ಹೆಚ್ಚು ಮರ ತೆರವು ಗೊಳಿಸಬೇಕಾಗಬಹುದು ಎಂಬ ಅಭಿಪ್ರಾಯ ವ್ಯಕ್ತಗೊಂಡಿತು.      ಇಚ್ಚಿಲದಲ್ಲಿ ಕಾಯಿದಿರಿಸಿದ 25 ಸೆಂಟ್ಸ್ ಜಾಗವನ್ನು ಸ್ಥಳೀಯರು ಅತಿಕ್ರಮಿಸಿದ್ದಾರೆ ಎಂಬ ಕೆಲ ಸದಸ್ಯರ ಆರೋಪಕ್ಕೆ ಕಂದಾಯ ಇಲಾಖೆ ವತಿಯಿಂದ ಸರ್ವೇ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸುತ್ತೇವೆ ಎಂದು ಭರವಸೆ ದೊರೆತಿದೆ ಎಂದು  ಮೆಸ್ಕಾಂ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಸಂಚಾರಿ ಪೊಲೀಸರು ದ್ವಾರದ ಬಳಿ ಮಾತ್ರ ಸಂಚಾರ ನಿಯಂತ್ರಣ ಮಾಡುತ್ತಿದ್ದು ಚಾರ್ಮಾಡಿ ರಸ್ತೆಯಲ್ಲೂ ನಿಯಂತ್ರಣ ನೋಡಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಗೊಂಡಿತು.  ವಿವಿಧ ಇಲಾಖಾ ಪ್ರತಿನಿಧಿಗಳು ತಮ್ಮ ಇಲಾಖಾ ಮಾಹಿತಿ ನೀಡಿದರು.

Latest 5

Related Posts