ಎನ್‌ಎಸ್‌ಟಿ ಸೋಮನಾಥ ನಾಯಕ್ ಮೇಲ್ಮನವಿ ವಜಾ-ಜೈಲು ಶಿಕ್ಷೆ ಖಾಯಂ

ಎನ್‌ಎಸ್‌ಟಿ ಸೋಮನಾಥ ನಾಯಕ್ ಮೇಲ್ಮನವಿ ವಜಾ-ಜೈಲು ಶಿಕ್ಷೆ ಖಾಯಂ
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹಾಗೂ ಶ್ರೀ ಕ್ಷೇತ್ರದ ಸಂಸ್ಥೆಗಳ ಬಗ್ಗೆ ನ್ಯಾಯಾಲಯದ ತಡೆಯಾಜ್ಞೆಯನ್ನೂ ಧಿಕ್ಕರಿಸಿ, ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನ್ಯಾಯಾಂಗ ನಿಂದನೆಗೈದ ಆರೋಪದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ರಿಗೆ ಬೆಳ್ತಂಗಡಿಯ ಜೆಎಂಎಫ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯ ಅಕ್ಟೋಬರ್ 19ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಸೋಮನಾಥ ನಾಯಕ್‌ರಿಗೆ ಜೈಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ನೀಡಿದೆ.ಪ್ರಕರಣದ ವಿವರ: ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹಾಗೂ ಶ್ರೀ ಕ್ಷೇತ್ರದ ಸಂಸ್ಥೆಗಳ ಬಗ್ಗೆ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದರು ಎಂದು ಡಾ. ಹೆಗ್ಗಡೆಯವರು ಬೆಳ್ತಂಗಡಿ ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ನ್ಯಾಯಾಲಯ 2013ರ ನವೆಂಬರ್ 5ರಂದು ನೀಡಿದ ತೀರ್ಪೊಂದರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಮತ್ತು ಕ್ಷೇತ್ರದ ಸಂಸ್ಥೆಗಳ ಬಗ್ಗೆ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಬರಹಗಳನ್ನು ಪ್ರಕಟಿಸದಂತೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಸಹಿತ ಐವರ ಮೇಲೆ ನಿರ್ಬಂಧ ಹೇರಿತ್ತು. ನ್ಯಾಯಾಲಯದ ಈ ನಿರ್ಬಂಧವನ್ನು ಕಡೆಗಣಿಸಿದ ಸೋಮನಾಥ ನಾಯಕ್, ‘ನಾವು ದಾಖಲೆಗಳಿದ್ದೇ ಡಾ. ಹೆಗ್ಗಡೆಯವರು ಬಗ್ಗೆ ಆರೋಪ ಮಾಡುತ್ತಿದ್ದೇವೆ. ನ್ಯಾಯಾಲಯ ‘ಫೇರ್ ಕಮೆಂಟ್’ ಮಾಡಬಾರದು ಎಂದು ಹೇಳಿಲ್ಲ’ ಎಂಬ ವಾದ ಮುಂದಿರಿಸಿ, ಡಾ. ಹೆಗ್ಗಡೆಯವರ ವಿರುದ್ಧ ಟೀಕೆ-ಆರೋಪ ಮಾಡುತ್ತಾ ಬಂದರು. ಸೋಮನಾಥ ನಾಯಕ್‌ರ ಈ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಡಾ. ಹೆಗ್ಗಡೆಯವರ ದೂರನ್ನು ಸ್ವೀಕರಿಸಿದ ಬೆಳ್ತಂಗಡಿ ಜೆಎಂಎಫ್ ನ್ಯಾಯಾಲಯ ವಿಚಾರಣೆ ನಡೆಸಿ, ನ್ಯಾಯಾಲಯದ ನಿರ್ಬಂಧವನ್ನು ಉಲ್ಲಂಘಿಸಿದ ಸೋಮನಾಥ ನಾಯಕ್‌ರನ್ನು ‘ದೋಷಿ’ ಎಂದು ತೀರ್ಮಾನಿಸಿ; ಪ್ರಕರಣದ ಅಪರಾಧಿ ಸೋಮನಾಥ ನಾಯಕ್‌ರಿಗೆ 3ತಿಂಗಳ ಜೈಲು ಶಿಕ್ಷೆ ವಿಧಿಸಿತಲ್ಲದೇ, ದೂರುದಾರರಿಗೆ ರೂಪಾಯಿ 4.5 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತು. ಮಾತ್ರವಲ್ಲ, ಸೋಮನಾಥ ನಾಯಕ್‌ರ ಆಸ್ತಿ‌ ಮುಟ್ಟುಗೋಲಿಗೂ ಆದೇಶಿಸಿತು. ಬೆಳ್ತಂಗಡಿ ಜೆಎಂಎಫ್ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಬೆಳ್ತಂಗಡಿಯ ಜೆಎಂಎಫ್ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮೊರೆ ಹೋದ ಸೋಮನಾಥ ನಾಯಕ್‌ರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, 2021ರ ಜೂನ್ 8ರಂದು ನೀಡಿದ ತೀರ್ಪಿನಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ಇದರ ವಿರುದ್ಧ ಮತ್ತೆ ಬೆಳ್ತಂಗಡಿಯ ಜೆಎಂಎಫ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ ಸೋಮನಾಥ ನಾಯಕ್‌ರಿಗೆ ಕಾನೂನು ಹೋರಾಟದಲ್ಲಿ ಇಲ್ಲೂ ಹಿನ್ನಡೆಯಾಯಿತು. ‘ಸೋಮನಾಥ ನಾಯಕ್‌ ಸಲ್ಲಿಸಿರುವ ಮೇಲ್ಮನವಿಯಲ್ಲಿ ನಿಜಾಂಶ ಇಲ್ಲ’ ಎಂದು ತೀರ್ಪಿತ್ತ ಬೆಳ್ತಂಗಡಿ ಜೆಎಂಎಫ್ ಪ್ರಧಾನ ಸಿವಿಲ್ ನ್ಯಾಯಾಲಯ 2022ರ ಮಾರ್ಚ್ 31ರಂದು ಪ್ರಕರಣದ ಅಪರಾಧಿ ಸೋಮನಾಥ ನಾಯಕ್‌ರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.ಈ ತೀರ್ಪನ್ನು ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸೋಮನಾಥ ನಾಯಕ್‌ರಿಗೆ ಇಲ್ಲೂ ಹಿನ್ನಡೆಯೇ. ‘ವಿಚಾರಣಾ ನ್ಯಾಯಾಲಯಗಳ ಆದೇಶ ಸಮರ್ಪಕವಾಗಿದೆ. ಈ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಮತ್ತೆ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ತೀರ್ಪು ನೀಡಿ 2022ರ ಮೇ 5ರಂದು ಸೋಮನಾಥ ನಾಯಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.ರಾಜ್ಯ ಉಚ್ಛ ನ್ಯಾಯಾಲಯದ ಈ ತೀರ್ಪನ್ನು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸೋಮನಾಥ ನಾಯಕ್‌ರ ಮೇಲ್ಮನವಿಯನ್ನು ಇದೀಗ ದೇಶದ ಸರ್ವೋಚ್ಛ ನ್ಯಾಯಾಲಯವೂ ತಿರಸ್ಕರಿಸಿದ್ದು ಕೆಳಹಂತದ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ.‌ ಸೋಮನಾಥ ನಾಯಕ್ ಕ್ಷಮೆ ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ, ‘ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಸೋಮನಾಥ್ ನಾಯಕ್‌ರ ನಡೆ ಕ್ಷಮಾರ್ಹವಲ್ಲ’ ಎಂದು ಕಟುವಾದ ಶಬ್ಧಗಳಿಂದ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಅಲ್ಲದೇ; ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪನ್ನು ಗೌರವಿಸಿ, ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ. ಪರಿಣಾಮ ಇದೀಗ ಸೋಮನಾಥ ನಾಯಕ್‌ರಿಗೆ ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಖಾಯಂ ಆದಂತಾಗಿದೆ.

Latest 5

Related Posts