ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ಓರ್ವ ಚುನಾಯಿತ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರಿದ್ದಾರೆ. ತಾಲೂಕಿನ ಮತದಾರರು ಹೆದ್ದಾರಿಯ ಹೊಂಡಗುಂಡಿಯ ರಸ್ತೆಯಲ್ಲಿ ಸಂಚರಿಸಲು ಪರದಾಡಿ ಸಾಕಷ್ಟು ಬಾರಿ ರಸ್ತೆ ರಿಪೇರಿ ಮಾಡುವಂತೆ ತಮ್ಮ ಬಿಜೆಪಿಯ ಶಾಸಕ ಹರೀಶ್ ಪೂಂಜರಲ್ಲಿ ಪರಿಪರಿಯಾಗಿ ವಿನಂತಿಸಿದರು; ಪ್ರತಿಭಟನೆ ನಡೆಸಿ ಎಚ್ಚರಿಸಲು ನೋಡಿದರು. ಆದರೆ ನಮ್ಮ ಶಾಸಕ ಹರೀಶ್ ಪೂಂಜ ಎಚ್ಚರವಾಗಲೇ ಇಲ್ಲ. ಕಾರ್ಯಕ್ರಮವೊಂದರಲ್ಲಿ ರಸ್ತೆ ದುರಸ್ತಿಗೆ ಮನವಿ ಮಾಡಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರಿಗೆ ಉತ್ತರಿಸಿದ ಶಾಸಕ ಹರೀಶ್ ಪೂಂಜ, ‘ರಸ್ತೆ ರಿಪೇರಿ ಕಾಮಗಾರಿ ಮಾಡುವ ಕಾರ್ಮಿಕರಿಗೆ ಕೊಡೆ ಹಿಡಿಯಲು ಜನ ಕೊಡಿ’ ಎಂದು ಉಡಾಫೆಯ ಉತ್ತರ ನೀಡುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿತ್ತು. ಆದರೂ ರಸ್ತೆ ರಿಪೇರಿ ಗಗನಕುಸುಮವಾಗಿಯೇ ಉಳಿದಿತ್ತು. ಪ್ರಯಾಣಿಕರ ಸಂಕಟ ನಿತ್ಯ ಗೋಳಾಗಿತ್ತು. ರಸ್ತೆ ದುರಸ್ತಿ ಬಗ್ಗೆ ಶಾಸಕ ಹರೀಶ್ ಪೂಂಜರ ಸಂಪೂರ್ಣ ವೈಫಲ್ಯಕ್ಕೆ ಕಾರಣಗಳೇ ಸಿಕ್ಕುತ್ತಿರಲಿಲ್ಲ.ಇದೀಗ ಬೆಳ್ತಂಗಡಿ ತಾಲೂಕಿನ ಹೆದ್ದಾರಿ ದುರಸ್ತಿಗೆ ವ್ಯವಸ್ಥೆ ಮಾಡಲು ಸ್ವತಹ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೇ ಎಂಟ್ರಿ ಕೊಟ್ಟಿದ್ದಾರೆ. ನವೆಂಬರ್ 19ರಿಂದ 24ರತನಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದ್ದು, ಕ್ಷೇತ್ರಕ್ಕೆ ರಾಜ್ಯದ ವಿವಿದೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವವರಿದ್ದಾರೆ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ದುರಸ್ತಿಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಸ್ವತಹ ಪತ್ರ ಮುಖೇನ ಮನವಿ ಮಾಡಿ ಮಾಡಿರುವ ಡಾ. ಹೆಗ್ಗಡೆ; ತೀರಾ ನಾದುರಸ್ತಿಯಲ್ಲಿರುವ ಗುರುವಾಯನಕೆರೆಯಿಂದ ಉಜಿರೆ ತನಕದ ರಸ್ತೆ ಹಾಗೂ ಪೆರಿಯಶಾಂತಿಯಿಂದ ಧರ್ಮಸ್ಥಳದವರೆಗಿನ ರಸ್ತೆಗಳನ್ನು ಆದ್ಯತೆ ನೆಲೆಯಲ್ಲಿ ದುರಸ್ತಿ ಮಾಡಿಸುವಂತೆ ವಿನಂತಿಸಿದ್ದು, ಇದಕ್ಕಾಗಿ 1ಕೋಟಿ ರೂಪಾಯಿ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಡಾ. ಹೆಗ್ಗಡೆಯವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದೀಗ ಬೆಳ್ತಂಗಡಿ ತಾಲೂಕಿನ ಹೆದ್ದಾರಿ ದುರಸ್ತಿಗಾಗಿ 1ಕೋಟಿ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದಾರೆ. ಅಂದ ಮೇಲೆ ತೀರಾ ಹದಗೆಟ್ಟ ಹೆದ್ದಾರಿ ರಸ್ತೆ ದುರಸ್ತಿಯಲ್ಲಿ ಶಾಸಕ ಹರೀಶ್ ಪೂಂಜರ ಪಾತ್ರ?






