ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ
Facebook
Twitter
LinkedIn
WhatsApp

ಬೆಳ್ತಂಗಡಿ: 2021-22ನೇ ಸಾಲಿನಲ್ಲಿ 506 ಕೋಟಿ 59 ಲಕ್ಷ ರೂಪಾಯಿ ವ್ಯವಹಾರ ನಡೆಸಿ, ದಾಖಲೆಯ 1ಕೋಟಿ 20ಲಕ್ಷ ರೂಪಾಯಿ ಲಾಭಾಂಶಗಳಿಸಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಶಾಖೆಯು ನವೆಂಬರ್ 14ರಂದು ಮಡಂತ್ಯಾರು ಪೊಂಪೈ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ನವೆಂಬರ್ 7ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ವಿವರ ನೀಡಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ ನಾಯಕ್ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂದನೀಯ ಬೇಸಿಲ್ ವಾಸ್, ಕಂಪ್ಯೂಟರ್ ಉದ್ಘಾಟನೆಯನ್ನು ಮಾಲಾಡಿ ಗ್ರಾಮ ಪಂಚಾಯತ್ ಧರ್ಮಸ್ಥಳ ಅಧ್ಯಕ್ಷೆ ಬೇಬಿ ಸುಸ್ಸಾನಾ, ಪ್ರಥಮ ಠೇವಣಿಪತ್ರದ ಬಿಡುಗಡೆಯನ್ನು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿಠಲ ಶೆಟ್ಟಿ ಮೂಡಾಯೂರು ನಡೆಸಿಕೊಡಲಿದ್ದಾರೆ.ನಿವೃತ್ತ ಉಪತಹಶೀಲ್ದಾರ್ ಬಿ. ಅಬ್ದುಲ್ ರಹಿಮಾನ್, ಉದ್ಯಮಿ ಪಿ. ಅನಿಲ್ ಕುಮಾರ್ ಅಧಿಕಾರಿ, ಕಟ್ಟಡದ ಮಾಲಿಕ ಜೇಸನ್ ರೊಡ್ರಿಗಸ್ ಭಾಗವಹಿಸಲಿದ್ದಾರೆ.ಆದರ್ಶ ಸೊಸೈಟಿಯಲ್ಲಿ ಪ್ರಸ್ತುತ 7635 ಸದಸ್ಯರಿದ್ದು, ಒಟ್ಟು ಪಾಲು ಬಂಡವಾಳ 2.69 ಕೋಟಿ ರೂಪಾಯಿಯಷ್ಟು ಹೊಂದಿರುತ್ತದೆ. 104.85 ಕೋಟಿ ಠೇವಣಿ ಹೊಂದಿದೆ. 2002ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದು, ಪುತ್ತೂರಿನ‌ ದರ್ಬೆಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಅನುಭವಿ ಮತ್ತು ವಿದ್ಯಾವ೦ತ ಆಡಳಿತ ಮಂಡಳಿ ಸದಸ್ಯರು ಹಾಗೂ ಸದಸ್ಯರ ಸಕಾಲಿಕ ಸಲಹೆ, ಸೂಚನೆ, ಸಹಕಾರಗಳಿ೦ದ ಉತ್ತಮ ಕಾರ್ಯಸಾಧನೆಗಳಿಂದ ಗಣನೀಯ ಪ್ರಗತಿ ಹೊಂದಿದೆ. ಕಳೆದ 20ವರ್ಷಗಳಲ್ಲಿ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ ಮತ್ತು ಬೊಳುವಾರು ಹೀಗೆ 12 ಶಾಖೆಗಳನ್ನು ಹೊಂದಿ, ಇದೀಗ ಮಡಂತ್ಯಾರಿನಲ್ಲಿ 13 ನೇ ಶಾಖೆ ತೆರೆಯುತ್ತಿದೆ ಎಂದರು.ಜಾಮೀನು ಸಾಲ, ಅಡಮಾನ ಸಾಲ, ಗೃಹ ಸಾಲ, ವಾಹನ ಸಾಲ, ಆಭರಣ ಸಾಲ, ಉಚಾಪತಿ ಸಾಲ (ಓವರ್ ಡ್ರಾಪ್ಟ್) ಹಾಗೂ ಇನ್ನಿತರ ಸಾಲಗಳ ಮೂಲಕ ರೂಪಾಯಿ 86.56 ಕೋಟಿಯಷ್ಟು ಸಾಲ ನೀಡಿರುತ್ತದೆ. ಸಂಘದ ಪ್ರಗತಿ, ಸೇವೆ ಮತ್ತು ಕಾರ್ಯ ಸಾಧನೆಯನ್ನು ಪರಿಗಣಿಸಿ ಮಂಗಳೂರಿನಲ್ಲಿ ನಡೆದ 64 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 2017-18ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ವೆಂದು ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತದೆ. ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿದ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 3 ಸಲ ‘ಸಾಧನಾ ಪ್ರಶಸ್ತಿ’ ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿರುತ್ತದೆ.ಸ೦ಘವು ಪ್ರಸ್ತುತ 2.81 ಕೋಟಿ ರೂಪಾಯಿಗಳಷ್ಟು ಕ್ಷೇಮನಿಧಿ ಮತ್ತು 2.88 ಕೋಟಿ ರೂಪಾಯಿಗಳಷ್ಟು ಇತರ ನಿಧಿಗಳನ್ನು ಹೊ0ದಿ ರೂಪಾಯಿ 112.61 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘದ ಆರಂಭದಿಂದ ಇಂದಿನವರೆಗೆ ಆಡಿಟ್ ವರ್ಗಿಕರಣದಲ್ಲಿ ‘ಎ’ ಗ್ರೇಡ್ ಹೊಂದಿದ್ದು, ಇಷ್ಟು ವರ್ಷದುದ್ದಕ್ಕೂ ಸದಸ್ಯರಿಗೆ ಡಿವಿಡೆಂಟ್ ಪಾವತಿಸಿದೆ. ಸರಕಾರಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಕಲಿಯುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ರೂಪಾಯಿ 17,23,000/- ವಿದ್ಯಾನಿಧಿ ಸಹಾಯಧನ ವಿತರಿಸಿದೆ‌.2022-23 ನೇ ಸಾಲಿನಲ್ಲಿ ಸಂಘವು ಸುಮಾರು ರೂಪಾಯಿ 600 ಕೋಟಿಯಷ್ಟು ವ್ಯವಹಾರ ನಡೆಸಿ ರೂಪಾಯಿ 1.40 ಕೋಟಿಯಷ್ಟು ಲಾಭ ದಾಖಲಿಸುವ ಗುರಿ ಹೊಂದಿದೆ; ಅಲ್ಲದೆ ರೂಪಾಯಿ 110ಕೋಟಿಯಷ್ಟು ಠೇವಣಿ ಸಂಗ್ರಹಿಸುವ ಹಾಗೂ ರೂಪಾಯಿ 93ಕೋಟಿಯಷ್ಟು ಸಾಲ ನೀಡುವ ಯೋಜನೆಯನ್ನು ಇಟ್ಟುಕೊಂಡಿದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಪುತ್ತೂರು ತಾಲೂಕಿನ ಸವಣೂರು ಗ್ರಾಮದಲ್ಲಿ 75 ಸೆಂಟ್ಸ್ ಪರಿವರ್ತಿತ ಭೂಮಿಯನ್ನು ಖರೀದಿ ಮಾಡಿದ್ದು, ಆ ಸ್ಥಳದಲ್ಲಿ ಶಂಕುಸ್ಥಾಪನೆ ಮಾಡಿ ಸಂಘಕ್ಕೆ 25 ವರ್ಷ ಪೂರೈಸುವ ಸಮಯದಲ್ಲಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು. ಸಂಘದ ಸದಸ್ಯರಿಗೆ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ಅಳವಡಿಸುವ ಸಂದರ್ಭದಲ್ಲಿ ಸದ್ರಿಯವರಿಗೆ ಸಾಲ ಬೇಕಾದಲ್ಲಿ ಪುತ್ತೂರಿನ ಪದ್ಮಶ್ರೀ ಸೋಲಾರ್ ಸಿಸ್ಟಮ್ ಮತ್ತು ಪದ್ಮ ಸೋಲಾರ್ ಸಿಸ್ಟಮ್ ರವರ ಸಹಯೋಗದಲ್ಲಿ 0% ಬಡ್ಡಿ ದರದಲ್ಲಿ ಸಂಘದ ಮೂಲಕ ರೂಪಾಯಿ 1,00,000/- ವರೆಗೆ ಸಾಲವನ್ನು ವಿತರಿಸಲಾಗುತ್ತಿದೆ ಎಂದು ಅವರು ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕೆ. ರವೀಂದ್ರ ಶೆಟ್ಟಿ ಕೇನ್ಯ, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎನ್. ರಾಮಯ್ಯ ರೈ ತಿಂಗಳಾಡಿ ಮತ್ತು ಜೈರಾಜ್ ಭಂಡಾರಿ, ಪ್ರಬಂಧಕರಾದ ವಸಂತ ಜಾಲಾಡಿ ಉಪಸ್ಥಿತರಿದ್ದರು.

Latest 5

Related Posts