ಸಹಕಾರಿ ಚಟುವಟಿಕೆಯಿಂದ ಗ್ರಾಮದ ಅಭಿವೃದ್ಧಿ: ಮಡಂತ್ಯಾರಿನಲ್ಲಿ ಆದರ್ಶ ಸೊಸೈಟಿಯ 13ನೇ ಶಾಖೆ ಉದ್ಘಾಟಿಸಿ ಶಾಸಕ ಪೂಂಜ

ಸಹಕಾರಿ ಚಟುವಟಿಕೆಯಿಂದ ಗ್ರಾಮದ ಅಭಿವೃದ್ಧಿ:                                     ಮಡಂತ್ಯಾರಿನಲ್ಲಿ ಆದರ್ಶ ಸೊಸೈಟಿಯ 13ನೇ ಶಾಖೆ ಉದ್ಘಾಟಿಸಿ ಶಾಸಕ ಪೂಂಜ
Facebook
Twitter
LinkedIn
WhatsApp

 ಬೆಳ್ತಂಗಡಿ: ಜನಸಾಮಾನ್ಯರ ಆರ್ಥಿಕ ವ್ಯವಹಾರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ  ಸಹಕಾರ ಸಂಘಗಳ ಕ್ಷಿಪ್ರ ನೆರವು ಪ್ರಮುಖ ಕಾರಣವಾಗಿದೆ. ಸಹಕಾರ ಸಂಘಗಳು ಸಹಕಾರಿ  ತತ್ವದಡಿ ಜನಸಾಮಾನ್ಯರ ಅವಶ್ಯಕತೆ ಹಾಗೂ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಆರ್ಥಿಕ ಶಕ್ತಿ ನೀಡುತ್ತಿವೆ. ತುಳುನಾಡಿನ ಮಣ್ಣಿನಲ್ಲಿ ಆರ್ಥಿಕ ಶಕ್ತಿ ಅಡಗಿದ್ದು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನುಡಿದರು.    ಅವರು ನವೆಂಬರ್ 14ರಂದು ಮಡಂತ್ಯಾರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಶಾಖೆಯನ್ನು ಪೊಂಪೈ ವಾಣಿಜ್ಯ ಸಂಕೀರ್ಣದಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಮಡಂತ್ಯಾರು ಜವುಳಿ ಉದ್ಯಮ ಹಾಗೂ ದಿನಸಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದ್ದು, ತಾಲೂಕಿನ ಉಜಿರೆ ನಂತರದ ಎರಡನೇ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಸಂಘವು ಇನ್ನಷ್ಟು ಶಾಖೆಗಳನ್ನು ತೆರೆದು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿ ಮುಂದೆ ಬ್ಯಾಂಕ್ ಆಗಿ ದೇಶಕ್ಕೆ ಶಕ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.              ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ; ವ್ಯವಹಾರಕ್ಕೂ ವಿಶ್ವಾಸಕ್ಕೂ ಹತ್ತಿರದ ಸಂಬಂಧವಿದೆ. ಸ್ವಂತದ ಜತೆಗೆ ಸಮಾಜವನ್ನು ಗಮನಿಸುವವರು ಜನರ ಬಗೆಗೆ ಕಳಕಳಿ ಹಾಗೂ ಸೇವೆಯ ಮನೋಭಾವ ಹೊಂದಿ  ವಿಶ್ವಾಸದ ಆಧಾರದಲ್ಲಿ  ಬೆಳೆದರೆ ಸಂಸ್ಥೆ ಯಶಸ್ಸು ಕಾಣುತ್ತದೆ. ಹೊಸ ಸಂಘಗಳಿಂದ ಮಡಂತ್ಯಾರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರು. ಶಾಖೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ವಂದನೀಯ ಬೇಸಿಲ್ ವಾಸ್ ಮಾತನಾಡಿ, ಸಂಘದ ಸೇವೆಯ ಪರಿಮಳ ಎಲ್ಲೆಡೆ ಪಸರಿಸಿ, ಸುಭದ್ರವಾದ ಸೊಸೈಟಿ ರೈತರ ಅಸೆ, ಆಕಾಂಕ್ಷೆಗಳನ್ನು ಪೂರೈಸಿ  ಭದ್ರತಾ ಕೊಠಡಿ ಅಕ್ಷಯ ಪಾತ್ರೆಯಾಗಿ ತುಂಬಿ ತುಳುಕಲಿ ಎಂದು ಶುಭ ಹಾರೈಸಿದರು.      ಮಡಂತ್ಯಾರು ಶಾಖೆಯ ಪ್ರಥಮ ಠೇವಣಿ ಪತ್ರವನ್ನು  ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿಠಲ ಶೆಟ್ಟಿ ಮೂಡಾಯೂರು ಅವರು ನಾರಾಯಣ ಶೆಟ್ಟಿಯವರಿಗೆ  ಹಸ್ತಾಂತರಿಸಿದರು. ಶಾಖೆಯ ಕಂಪ್ಯೂಟರ್ ಕೊಠಡಿಯನ್ನು ನಿವೃತ್ತ ಉಪತಹಸೀಲ್ದಾರ್ ಬಿ. ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಪಿ. ಅನಿಲ್ ಕುಮಾರ್ ಅಧಿಕಾರಿ, ಪೊಂಪೈ ಸಂಕೀರ್ಣದ ಮಾಲಕ ಜೇಸನ್ ರೋಡ್ರಿಗಸ್, ಸಂಘದ ಉಪಾಧ್ಯಕ್ಷ ಸುಂದರ್ ರೈ ಸವಣೂರು ಉಪಸ್ಥಿತರಿದ್ದರು. ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಸುಸ್ಸಾನ ಶುಭ ಹಾರೈಸಿದರು. ಶಾಖೆಯ ವಿನ್ಯಾಸಕಾರ ಸಚ್ಚಿದಾನಂದ ಅವರನ್ನು ಗೌರವಿಸಲಾಯಿತು.              ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಕೆ. ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ. ನಾರಾಯಣ ಭಟ್, ಜಯಪ್ರಕಾಶ್ ರೈ, ಅಶ್ವಿನ್ ಎಲ್. ಶೆಟ್ಟಿ, ಸೀತಾರಾಮ ಶೆಟ್ಟಿ, ಪೂರ್ಣಿಮಾ ಎಸ್. ಅಳ್ವ , ಯಮುನ ಎಸ್. ರೈ, ಮಹಾಬಲ ರೈ, ಬಾಪು ಸಾಹೇಬ್, ರಾಮಯ್ಯ ರೈ,  ಚಿಕ್ಕಪ್ಪ ನಾಯ್ಕ್, ಜೈರಾಜ್ ಭಂಡಾರಿ, ಮಹಾದೇವ ಎಂ. ಉಪಸ್ಥಿತರಿದ್ದರು. ಪ್ರಜ್ಞಾಶ್ರೀ ಪ್ರಾರ್ಥಿಸಿ, ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ ವಂದಿಸಿದರು. ಉಜಿರೆಯ ನಿವೃತ್ತ ಶಾಖಾ  ವ್ಯವಸ್ಥಾಪಕ ಸಾಂತೂರು ಶ್ರೀನಿವಾಸ ತಂತ್ರಿ ನಿರೂಪಿಸಿದರು. ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡುತ್ತಾ; ಸಂಘವು 105 ಕೋಟಿ ಠೇವಣಿ ಹೊಂದಿದ್ದು, ಅಗತ್ಯವುಳ್ಳವರಿಗೆ ಶೀಘ್ರ ಸಾಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೂತನ ಮಡಂತ್ಯಾರು ಶಾಖೆಯಲ್ಲಿ ರೂಪಾಯಿ 2 ಕೋಟಿ ಠೇವಣಿ ಸಂಗ್ರಹವಾಗಿದೆ. ಸಂಘದ ಬೆಳವಣಿಗೆಯ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿದೆ. ಸಂಘವು ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ನೀಡಲು ಬದ್ಧವಾಗಿದೆ ಎಂದರು.

Latest 5

Related Posts