ಬೆಳ್ತಂಗಡಿ: ಸಾಕಷ್ಟು ಬಾರಿ ಎಚ್ಚರಿಸಿದರೂ ಕೆಲ ಮಂದಿ ಇಂದಿಗೂ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸುವುದನ್ನು ಬಿಟ್ಟಿಲ್ಲ. ಇದಕ್ಕೆ ಮೆಸ್ಕಾಂ ಅಧಿಕಾರಿಗಳು ತೋರುವ ಅತಿಯಾದ ಮಾನವೀಯತೆ ಹಾಗೂ ದಾಕ್ಷಿಣ್ಯವೇ ಕಾರಣ ಎಂಬುವುದು ಜನಸಾಮಾನ್ಯರ ಅಭಿಪ್ರಾಯ. ಕಾನೂನಿಗೇ ಸವಾಲಾಗಿ ಈ ರೀತಿಯಾಗಿ ವಿದ್ಯುತ್ ಕಂಬಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಮಾಜಘಾತುಕರಿಗೆ ಸರಕಾರಿ ಸೊತ್ತು ದುರ್ಬಳಕೆ ಕಾಯ್ದೆದಡಿ ಪ್ರಕರಣ ದಾಖಲಿಸಿ ದಂಡ ವಸೂಲಿಗೆ ಮೆಸ್ಕಾಂ ಅಧಿಕಾರಿಗಳು ಮುಂದಾದರೆ ಮಾತ್ರ ಇಂತಹ ಘಾತಕ ಶಕ್ತಿಗಳಿಗೆ ಮೂಗುದಾರ ಹಾಕಲು ಸಾಧ್ಯ. ಇಂದಿನ ರಾಜಕಾರಣಿಗಳ ಒತ್ತಡದ ನಡುವೆ ಇಂತಹ ಕಾನೂನು ಕ್ರಮ ಕೈಗೊಳ್ಳುವ ‘ದಂ’ ಮೆಸ್ಕಾಂ ಇಲಾಖೆಗೆ ಇದೆಯಾ ಎಂಬುದಕ್ಕೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳೇ ತಮ್ಮ ನಿಷ್ಠಾವಂತ ಕರ್ತವ್ಯದ ಮೂಲಕ ಉತ್ತರಿಸಬೇಕು.ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯ ಬೀದಿಗಳ ವಿದ್ಯುತ್ ಕಂಬಗಳಲ್ಲಿ ‘ಲಾಸ್ಟ್ಬೆಂಚ್’ ಸಿನಿಮಾದ ಫ್ಲೆಕ್ಸ್ಗಳು ರಾರಾಜಿದುತ್ತಿದೆ. ಮೆಸ್ಕಾಂ ಅಧಿಕಾರಿಗಳು ತಮ್ಮ ಎಲ್ಲಾ ಧೈರ್ಯ ಉಪಯೋಗಿಸಿ, ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಿದ ಒಬ್ಬರಿಗೆ ಅಥವಾ ಒಂದು ಸಂಸ್ಥೆಗೆ ಸರಕಾರಿ ಸೊತ್ತಿನ ದುರುಪಯೋಗ ಕಾನೂನಿನಡಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದರೆ ಅದು ಇತರರಿಗೂ ಎಚ್ಚರಿಕೆಯ ಗಂಟೆಯಾದೀತು. ಇಲ್ಲವಾದಲ್ಲಿ ಸಮಾಜಘಾತುಕರು ಹಾಗೂ ಪ್ರಭಾವಿಗಳು ವಿದ್ಯುತ್ ಕಂಬಗಳಲ್ಲಿ ಫ್ಲೆಕ್ಸ್ ಅಳವಡಿಸುವುದು; ಕಾರ್ಮಿಕರ ಜೀವದ ರಕ್ಷಣೆಗಾಗಿ ಪತ್ರಿಕೆಯವರು ಇಂತಹ ಸಮಾಜಘಾತುಕರ ಬಗ್ಗೆ ವರದಿ ಮಾಡುವುದು; ಮೆಸ್ಕಾಂ ಅಧಿಕಾರಿಗಳು ಅನಧಿಕೃತ-ಅಕ್ರಮ ಫ್ಲೆಕ್ಸ್ ತೆರವುಗೊಳಿಸುವುದು…. ಇದು ನಿರಂತರ ಪ್ರಕ್ರಿಯೆಯಾದೀತು. ಪ್ರಶಾಂತ್ ಆಚಾರ್ಯರ ಬಲಿದಾನದಂತೆ ಇನ್ನೊಂದು ಬಲಿದಾನವಾದಾಗ ಜನಪ್ರತಿನಿಧಿಗಳು ಸೇರಿದಂತೆ ಪ್ರಭಾವಿ ಸಮಾಜಘಾತುಕರು ಮತ್ತೆ ಮೊಸಳೆ ಕಣ್ಣೀರು ಸುರಿಸುವುದು…. ಹಾಗಾಗದಿರಲಿ.






