ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿ ನಂದ ಕುಮಾರ ತಂತ್ರಿ ಹಾಗೂ ವರದರಾಜ ವಾಸುಕೀವನ ಇವರ ಪೌರೋಹಿತ್ಯದಲ್ಲಿ ಸ್ಥಾಪಿತಗೊಂಡಿರುವ ಸಹಸ್ರನಾಗಬನದ ಶ್ರೀ ಸಹಸ್ರ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಅಷ್ಟಬಂಧ ಪವಿತ್ರ ಬ್ರಹ್ಮ ಕಲಶೋತ್ಸವ ಹಾಗೂ ನಾಗಮಂಡಲೋತ್ಸವ ಜನವರಿ 23ರಿಂದ 27ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಪ್ರದೀಪ್ ಎ. ನಾವೂರು ಹೇಳಿದರು.ಕ್ಷೇತ್ರದಲ್ಲಿ ಜನವರಿ 21ರಂದು ದೇಗುಲದ ವಠಾರದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ಶ್ರೀ ಅಷ್ಟ ಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವಾಲಯ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಜನವರಿ 23ರಂದು ವಿವಿಧ ಗ್ರಾಮಸ್ಥರಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, ದೇವತಾ ಪ್ರಾರ್ಥನೆ, ವಾಸ್ತು ಹೋಮ, ಪಾಕಶಾಲೆ, ಉಗ್ರಾಣ, ಹಸಿರುವಾಣಿ ಹೊರೆ ಕಾಣಿಕೆ ಇತ್ಯಾದಿಗಳ ಉದ್ಘಾಟನೆ ನಡೆಯಲಿದೆ.ಜನವರಿ 24ರಂದು ಗಣಪತಿ ಹೋಮ ಹಾಗೂ ಸರ್ಪತ್ರಯ ಮಂತ್ರ ಹೋಮ ಜರಗಲಿದೆ.ಸಂಜೆ 5ಗಂಟೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀರಾಮಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದು ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಮತ್ತಿತರರು ಉಪಸ್ಥಿತರಿರುವರು. ಶತಾಯುಷಿ ಬಂಗಾಡಿ ಅರಮನೆಯ ರವಿರಾಜ್ ಬಲ್ಲಾಳ್ ಅವರಿಗೆ ಜನ್ಮ ಶತಮಾನೋತ್ಸವ ಗೌರವ ಸಮರ್ಪಣೆ ನಡೆಯಲಿದೆ.ಜನವರಿ 25ರಂದು ವಿವಿಧ ವೈದಿಕ ಕಾರ್ಯಕ್ರಮಗಳ ಸಹಿತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಜನವರಿ 27ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.ಪ್ರತಿದಿನ ಸಂಜೆ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಪತ್ರಿಕಾಗೋಷ್ಠಿಯಲ್ಲಿಟ್ರಸ್ಟ್ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜೊತೆ ಕಾರ್ಯದರ್ಶಿ ಶ್ರೀಧರ ಗುಡಿಗಾರ, ತಾಲೂಕು ಘಟಕದ ಕಾರ್ಯದರ್ಶಿ ಮೋಹನ್, ಸದಸ್ಯರಾದ ವೆಂಕಪ್ಪ ಮೂಲ್ಯ, ಚಂದ್ರಶೇಖರ, ರತ್ನಾಕರ ಬಾಲಿ, ಡಾ. ಸುಮನಾ, ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.ಜನವರಿ 26 ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯ ಮತ್ತು ಕೃಷ್ಣಪ್ರಸಾದ್ ಮದ್ದೂರು ವೈದ್ಯ ಬಳಗದವರಿಂದ ನಾಗಮಂಡಲ ಸೇವೆ ಜರಗಲಿದೆ. ಈ ದಿನ ಶ್ರೀ ಗಣಪತಿ ದೇವರ ಮೂಡಪ್ಪ ಸೇವೆಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿರುವರು.






