ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗ ದಕ್ಷಿಣ ಕನ್ನಡ ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿದ್ದು, ಕೋಮು ಸಂಘರ್ಷವನ್ನು ಉಂಟುಮಾಡುವ ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವ ಭಾಷಣಗಳು ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣದ ಮುಖಾಂತರ ವೈರಲ್ ಆಗುತ್ತಾ ಇದೆ. ಇತ್ತೀಚೆಗೆ ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಮಾಡಿದ ಭಾಷಣವೊಂದು ಇದಕ್ಕೆ ಉದಾಹರಣೆ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನ ಫಾಝಿಲ್ ಕೊಲೆಯನ್ನು ನಮ್ಮ ಹುಡುಗರು ಶೌರ್ಯದಿಂದ ಮಾಡಿದ್ದು ಎಂದು ಎಲ್ಲರಎದುರೇ ಸಾರ್ವಜನಿಕವಾಗಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ. ಇದು ನಮ್ಮ ಯುವಕರ ಶೌರ್ಯ, ತಾಕತ್ತು ಎಂದು ಹೇಳುತ್ತಾ ಇನ್ನು ಮುಂದೆ ಇಂತಹ ದಾಳಿಗಳು ಇನ್ನಷ್ಟು ನಡೆಯಲಿವೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾನೆ. ಇದು ತೀರಾ ಆತಂಕಕಾರಿ ಬೆಳವಣಿಗೆ. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿನಾಗರಿಕ ಸಮಾಜದಲ್ಲಿ ಭೀತಿಯನ್ನು ಉಂಟು ಮಾಡಿದೆ. ಶರಣ್ ಪಂಪ್‌ವೆಲ್‌ನ ಈ ಅತಿರೇಕದ ದ್ವೇಷ ಭಾಷಣ ಕೊಲೆಗಳ ಸಮರ್ಥನೆ, ಬೆದರಿಕೆ, ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲುವಾರು ನೀಡಿ ಗಲಭೆಗೆ ಪ್ರಚೋದಿಸಿ, ಸಮಾಜವನ್ನು ವಿಭಜಿಸುವ ಈ ಮನಸ್ಥಿತಿಯು ಅತ್ಯಂತ ಅಪಾಯಕಾರಿ. ಇದು ಚುನಾವಣಾ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ಹಾಗೂ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಕೊಲೆ, ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಆತನನ್ನು ಕಠಿಣ ಕಾಯ್ದೆಯಡಿಯಲ್ಲಿ ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಈ ಮೂಲಕ ಕೋರುತ್ತಿದ್ದೇವೆ. ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ಗೌರವ, ನಂಬಿಕೆ ಉಳಿಯಲು ಈ ಕ್ರಮಕ್ಕೆ ಅನಿವಾರ್ಯ ಆಗಿರುತ್ತದೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ. ಆದ್ದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಬೇಕೆಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಲಾಯಿತು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಅಧ್ಯಕ್ಷರಾದ ಶೈಲೇಶ್ ಕುಮಾರ್, ರಂಜನ್ ಗೌಡ, ಕೆ.ಪಿ.ಸಿ.ಸಿ. ಕಾರ್ಮಿಕ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಅಬ್ದುಲ್ ರಹಿಮಾನ್ ಪಡ್ಪು, ಬಿ.ಎಮ್. ಹಮೀದ್, ಅಶ್ರಫ್ ನೆರಿಯ, ಯು. ಎ. ಹಮೀದ್, ಬಿ.ಕೆ. ವಸಂತ, ಖಾಲಿದ್ ಕಕ್ಯಾನ, ಅಬಿನಂದನ್ ಹರೀಶ್ ಕುಮಾರ್, ಮೆಹಬೂಬ್ ಬೆಳ್ತಂಗಡಿ, ಅಬ್ದುಲ್ ಕರೀಮ್ ಗೇರುಕಟ್ಟೆ, ನೇವಿರಾಜ್ ಕಿಲ್ಲೂರು, ಚಂದು ಎಲ್., ಭರತ್ ಕುಮಾರ್, ಪ್ರಭಾಕರ ನಲಿಕೆ, ಜಗದೀಶ್ ಬೆಳ್ತಂಗಡಿ, ಎಂ.ಕೆ. ಜಯಾನಂದ ಸವಣಾಲು, ಉಮರಬ್ಬ ನೆರಿಯ ಹಾಜರಿದ್ದರು.






