ಬೆಳ್ತಂಗಡಿ: ಸ್ವಾಮಿ ಸತ್ಯಕೊರಗಜ್ಜ ಕಟ್ಟೆ ಸೇವಾ ಸಮಿತಿ ಮಿಯೊಟ್ಟು ಪಲ್ಕೆ ಸಾವ್ಯ ಇಲ್ಲಿ ಕಲ್ಲುರ್ಟಿ ಹಾಗೂ ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ಎಪ್ರಿಲ್ 30ರಂದು ವಿಧಿವಿಧಾನಗಳೊಂದಿಗೆ ಜರುಗಿತು.ಬೆಳಿಗ್ಗೆ ಸ್ಥಳದಲ್ಲಿ ಪುಣ್ಯಾಹಕಲಶ ನಡೆದು ವಿವಿಧ ಕಟ್ಟು ಕಟ್ಟಲೆಗಳಂತೆ ಸ್ಥಳದ ಆರಾಧ್ಯ ದೈವ ಕಲ್ಲುರ್ಟಿಗೆ ಗಗ್ಗರ ಸೇವೆಯೊಂದಿಗೆ ಭಕ್ತರಿಂದ ಹರಕೆ ಸಮರ್ಪಿಸಲಾಗಿಯಿತು. ಬಳಿಕ ಕೊರಗಜ್ಜ ದೈವದ ಗಗ್ಗರ ಸೇವೆ ಜರುಗಿ ಭಕ್ತರಿಂದ ಬಂದ ಬೆಳ್ಳಿಯ ಮುಟ್ಟಾಳೆಯನ್ನು ಒಪ್ಪಿಸಲಾಯ್ತು. ಹಾಗೂ ಭಕ್ತರಿಂದ ಬಂದ ತೆಂಗಿನೆಣ್ಣೆ, ದೀಪದ ಎಣ್ಣೆ, ದನದ ಹಾಲು ಒಪ್ಪಿಸಲಾಗಿ ಹರಕೆ ಹೇಳಿಕೊಂಡಂತೆ ಹಲವು ಮಕ್ಕಳನ್ನು ದೈವದ ಕೈಗೆ ಒಪ್ಪಿಸಿ ಕರಿಗಂಧ ಹಾಕಲಾಯ್ತು.ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಮಿತಿಯ ಪಧಾಧಿಕಾರಿಗಳಾದ ನವೀನ್ ಕುಮಾರ್ ಶೆಟ್ಟಿ ಸಾವ್ಯ, ಕೆ. ಸದಾಶಿವ ಹೆಗ್ಡೆ ಕುಂಟ್ಯಾನ, ಕಿಟ್ಟಣ್ಣ ತುಂಬೆಗುಡ್ಡೆ ನಾರಾವಿ, ದೈವದ ಅರ್ಚಕ ಅಪ್ಪು ಕೊರಗ ಮಿಯೊಟ್ಟು ಹಾಗೂ ಬಿಡುಗು ತೋಮರ ಕೊರಗ ಕುಟುಂಬಸ್ಥರು ಮಿಯೊಟ್ಟು ಪಲ್ಕೆ ಹಾಗೂ ಸಮಿತಿಯ ಪಧಾಧಿಕಾರಿಗಳು ಕಾರ್ಯಕಾರಿ ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದು ಸಹಕರಿಸಿದರು.ಸೇವಾ ಸಮಿತಿಯ ಅಧ್ಯಕ್ಷ ಕೆ. ಸದಾಶಿವ ಹೆಗ್ಡೆ ಕುಂಟ್ಯಾನ ದೈವದ ಕೊಡಿಯಡಿಯಲ್ಲಿ ನಡೆಯುವ ಕಾರ್ಯಕ್ರಮ ವಿವರಿಸಿ ಊರ ಪರವೂರಿನಿಂದ ಬಂದ ಭಕ್ತಾಧಿಗಳನ್ನು ಸ್ವಾಗತಿಸಿ ಶ್ರೀ ದೈವದ ಅಭಯ ಪಡೆದು ಅಪ್ಪು ಕೊರಗ ಮತ್ತು ಕುಟುಂಬಸ್ಥರು ದೈವದ ಸಿರಿಮುಡಿ ಗಂಧ ಪ್ರಸಾದ ನೀಡಿದರು.






