ಬೆಳ್ತಂಗಡಿ: ಬೆಳ್ತಂಗಡಿ ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ. ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಣೇಶ ರಾಮಚಂದ್ರ ಭಟ್ ಹಾಗೂ ಕಲ್ಮಂಜ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಮಾಲಿನಿ ಹೆಗಡೆಯವರ ಪುತ್ರನಾದ ಜಿ.ಕೆ. ಚಿನ್ಮಯ್; ಎಲ್‌ಕೆಜಿ ಯಿಂದ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.ಜಿ.ಕೆ. ಚಿನ್ಮಯ್ ಕನ್ನಡದಲ್ಲಿ-125 ಇಂಗ್ಲಿಷ್-100, ಹಿಂದಿ-100, ಗಣಿತ-100, ಸಮಾಜ-100 ಹಾಗೂ ವಿಜ್ಞಾನದಲ್ಲಿ 99 ಅಂಕಗಳಿಸಿದ್ದಾನೆ.ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಚಿನ್ಮಯ್ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದು; ಈ ಬಾರಿಯ ಪ್ರತಿಭಾ ಕಾರಂಜಿಯ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ರಾಜ್ಯಮಟ್ಟದ ವಿಜೇತ. ಕಳೆದ ವರ್ಷ ಜರಗಿದ ರಾಜ್ಯಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಶಿಕ್ಷಣ ಇಲಾಖೆ ನಡೆಸುವ ಕಲೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿಜೇತರಾಗಿದ್ದಾನೆ.ದೈನಂದಿನ ಪಾಠಗಳ ಬಗ್ಗೆ ವಿಶೇಷ ಗಮನಹರಿಸಿ ಹೆಚ್ಚಿನ ಒತ್ತಡವಿಲ್ಲದೆ ವ್ಯಾಸಂಗ ಮಾಡುತ್ತಿದ್ದ. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಉತ್ತಮ ಅಂಕ ಗಳಿಸಲು ಕಾರಣವಾಗಿದೆ. ದಿನಚರಿ ರೂಪಿಸಿಕೊಂಡು ಪರೀಕ್ಷೆಗೆ ತಯಾರಾಗಿದ್ದ. ಉತ್ತಮ ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದು ಅದರಲ್ಲಿ ಯಶಸ್ವಿಯಾಗಿದ್ದಾನೆ ಎಂದು ಆತನ ತಂದೆ ಗಣೇಶ ರಾಮಚಂದ್ರ ಭಟ್ ಹೇಳಿರುತ್ತಾರೆ.ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಓದಿನಲ್ಲೂ ಮುಂದಿದ್ದ ಚಿನ್ಮಯ್ ಜಿ.ಕೆ. ಇಂದು ರಾಜ್ಯವೇ ಗುರುತಿಸುವ ಸಾಧನೆ ಮಾಡಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇತರ ವಿದ್ಯಾರ್ಥಿಗಳಿಗೂ ಕಲಿಕೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದ ಎಂದು ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ಹೇಳುತ್ತಾರೆ.






