ಬೆಳ್ತಂಗಡಿ: ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಸ ಆಂದೋಲನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಆರಂಭಿಸಿದೆ. ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸುವ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯದ ಜಯರಾಮ ಕುದ್ರೆಂತಾಯರ ಮನೆಯಲ್ಲಿ ಮೇ 7 ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಪೂರ್ವಾಧ್ಯಕ್ಷ ಮತ್ತು ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಜಯರಾಮ ಕುದ್ರೆಂತಾಯರ ಮನೆಯಲ್ಲಿ ‘ಮನೆ ಮನೆ ಗಮಕ ಕಾರ್ಯಕ್ರಮ’ವನ್ನು ಕಲಾ ಪೋಷಕ ಭುಜಬಲಿ ಧರ್ಮಸ್ಥಳ ಉದ್ಘಾಟಿಸಿ ಮಾತನಾಡಿ; ಎಲ್ಲ ಕಲೆಗಳಿಗೂ ಸಂಗೀತವು ಮೂಲವಾಗಿದ್ದು, ವಚನ ಪ್ರಧಾನವಾದ ಗಮಕ ಕಲೆಯು ನಮ್ಮ ಸಂಸ್ಕೃತಿಯನ್ನು ಉಳಿಸಲು ಬಲು ಮುಖ್ಯ ಕಾರಣವಾಗಿದೆ. ಇಂತಹ ಗಮಕ ಕಲೆಯ ಮೂಲಕ ಕನ್ನಡದ ಕಾವ್ಯ ಸಂಪತ್ತನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕುಮಾರ ವ್ಯಾಸ ವಿರಚಿತ ಕರ್ಣಾಟಕ ಕಥಾಮಂಜರಿಯ ಉದ್ಯೋಗ ಪರ್ವದಿಂದ ಆಯ್ದ ಕೃಷ್ಣತಂತ್ರ ಕಾವ್ಯ ಭಾಗವನ್ನು ವಚನ- ವ್ಯಾಖ್ಯಾನ ಮಾಡಲಾಯಿತು. ವಚನದಲ್ಲಿ ಹಳೆಯ ಮತ್ತು ಹೊಸ ಗಮಕ ಪ್ರತಿಭೆಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಯರಾಮ ಕುದ್ರೆಂತಾಯರ ಮೊಮ್ಮಕ್ಕಳಾದ ಆರ್ಯ ಹೊಳ್ಳ, ಶ್ರಿಯಾ ಹೊಳ್ಳ, ಆಶ್ರಿತಾ, ವರ್ಷಾ ಕಾರ್ತಿಕ್ ಭಟ್ ಮತ್ತು ಆಹ್ವಾಹಿತ ಗಮಕಿಗಳಾದ ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಮತ್ತು ಶ್ರೀವಿದ್ಯಾ ಐತಾಳ್ ಪಾಲ್ಗೊಂಡಿದ್ದರು. ವ್ಯಾಖ್ಯಾನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಡೆಸಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಉಪಾಧ್ಯಕ್ಷರಾದ ರಾಮಕೃಷ್ಣ ಭಟ್ ಬೆಳಾಲು, ರಮೇಶ್ ಮಯ್ಯ, ಪೂರ್ವಾಧ್ಯಕ್ಷ ಸುರೇಶ್ ಕುದ್ರೆಂತಾಯ, ಸಂಗೀತ ಶಿಕ್ಷಕರಾದ ಎ.ಡಿ. ಸುರೇಶ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾದ ಹರಿದಾಸ ಗಾಂಭೀರ ಮತ್ತು ಮನೆಯವರು, ಬಂಧು ಬಳಗ ಉಪಸ್ಥಿತರಿದ್ದರು.






