‘ವಿದ್ಯಾರ್ಥಿಗಳು ಸಾಧನೆಯ ಮೂಲಕ ನಾಡಿಗೆ ಕೀರ್ತಿ ತರಬೇಕು’

‘ವಿದ್ಯಾರ್ಥಿಗಳು ಸಾಧನೆಯ ಮೂಲಕ ನಾಡಿಗೆ ಕೀರ್ತಿ ತರಬೇಕು’
Facebook
Twitter
LinkedIn
WhatsApp

ಬೆಳ್ತಂಗಡಿ : ಭಾರತೀಯ ವಿಜ್ಞಾನಿಗಳು ಇಸ್ರೋದಲ್ಲಿ ವಿಶೇಷ ಸಾಧನೆ, ಸಂಶೋಧನೆಗಳಿಂದ ನಾಡಿಗೆ ಕೀರ್ತಿ ತಂದಿದ್ದಾರೆ. ರಾಕೆಟ್ ಹಾಗೂ ಉಪಗ್ರಹ ಉಡಾವಣೆಯಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆ ಶ್ರೇಷ್ಠ ಹಾಗೂ ಅದ್ವಿತೀಯವಾದುದು. ಚಂದ್ರಯಾನದ ಸಾಧನೆಯ ಯಶಸ್ಸಿಗೆ ಪ್ರಧಾನಿ ಸಹಿತ ಎಲ್ಲೆಡೆಗಳಿಂದ ಅಭಿನಂದನೆ ವ್ಯಕ್ತವಾಗಿದೆ. ಇಸ್ರೋ ಸಂಸ್ಥೆಯಲ್ಲಿ ಗಗನಯಾನಿ ಹಾಗೂ ವಿಜ್ಞಾನಿಗಳಿಗೆ ವಿಫುಲ ಉದ್ಯೋಗಾವಕಾಶವಿದ್ದು, ಅವರಿಗೆ ಎಲ್ಲ ಸವಲತ್ತು ದೊರೆಯಲಿದೆ. ವಿದ್ಯಾರ್ಥಿಗಳು ಬದುಕಿನಲ್ಲಿ ವಿಶೇಷ ಸಾಧನೆಯಿಂದ ನಾಡು ನುಡಿಗೆ ಕೀರ್ತಿ ತರುವಂತವರಾಗಬೇಕು ಎಂದು ಬೆಂಗಳೂರಿನ ಇಸ್ರೋ ಸೆಟ್‌ಲೈಟ್ ಕೇಂದ್ರದ ವಿಜ್ಞಾನಿ ಶ್ರೀನಿವಾಸ್ ಎಚ್.ಎಲ್. ನುಡಿದರು. ಅವರು ಮೇ 9ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಂಶೋಧನೆ, ವಿನೂತನ ಅವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆ ಸಾಧಿಸಿ, ಶ್ರೇಷ್ಠತೆಯ ಮೆಟ್ಟಿಲೇರಲು ಪರಿಶ್ರಮಪಡಬೇಕು ಎಂದು ಸಲಹೆ ನೀಡಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ; ಶ್ರೀ ಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದೆ‌. ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಹವ್ಯಾಸ ಹಾಗೂ ಅಭಿರುಚಿಗೆ ತಕ್ಕಂತೆ ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ವಿಭಾಗಗಳಲ್ಲಿ ವಿಶೇಷ ಸಾಧನೆ ಮೆರೆದು ಸಂಸ್ಥೆಗೆ ಕೀರ್ತಿ ತರುವುದರ ಜೊತೆಗೆ ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗಾವಕಾಶವನ್ನೂ ಪಡೆಯುತ್ತಿರುವುದು ಹೆಮ್ಮೆ ಹಾಗೂ ಅಭಿನಂದನೀಯ ಎಂದರು. ಕಾಲೇಜಿನಲ್ಲಿ ಪಿ‌ಎಚ್‌ಡಿ ಪಡೆದ ಉಪನ್ಯಾಸಕರು, ರಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸಾಧಕರನ್ನು ಗಣ್ಯ ಅತಿಥಿಗಳು ಪುರಸ್ಕರಿಸಿದರು. ಕಾಲೇ ಜು ಪ್ರಾಚಾರ್ಯ ಡಾ. ಅಶೋಕ್ ಕುಮಾರ್ ಟಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣಪ್ರಸಾದ್, ರಾಂಕ್ ವಿಜೇತ ವಿದ್ಯಾರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಬಸವ ಸ್ವಾಗತಿಸಿ, ಲಾರೆನ್ ಮತ್ತು ಪೂರ್ಣಿಮಾ ಜೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪೂರ್ಣಿಮಾ ಜೈನ್ ವಂದಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಶ್ವನಾಥ್, ಪಾಲಿಟೆಕ್ನಿಕ್ ಕಾಲೇಜು ಪ್ರಿನ್ಸಿಪಾಲ್ ಸಂತೋಷ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.

Latest 5

Related Posts