ಆರಂಭಿಕ ಮಳೆ ಸೃಷ್ಟಿಸಿದ ಅವಾಂತರ

ಆರಂಭಿಕ ಮಳೆ ಸೃಷ್ಟಿಸಿದ ಅವಾಂತರ
Facebook
Twitter
LinkedIn
WhatsApp

ಬೆಳ್ತಂಗಡಿ: ಮುಂಡಾಜೆ, ಚಾರ್ಮಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೇ 15ರ ಮುಂಜಾನೆ ಉತ್ತಮ ಮಳೆ ಸುರಿಯಿತು. ಬೆಳಗಿನ ಜಾವ ಗಂಟೆ 4ರ ಸುಮಾರಿಗೆ ಆರಂಭವಾದ ಮಳೆ 6-30ರವರೆಗೆ ಮುಂದುವರಿಯಿತು.ಮುಂಡಾಜೆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಸ್ತೆ ಅಗೆದು ಹಾಕಲಾದ ಸ್ಥಳಗಳಲ್ಲಿ ಕೆಸರು ತುಂಬಿ ಜಾರುವ ಕಾರಣ ವಾಹನ ಸವಾರರು ಪರದಾಟ ಅನುಭವಿಸಿದರು. ಕೆಲವು ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದ ಘಟನೆಯೂ ನಡೆದಿದೆ.ಹೆದ್ದಾರಿಯ ಉಜಿರೆ ಬಳಿ ಸುಮಾರು ಒಂದು ಕಿ.ಮೀ. ಪ್ರದೇಶದಲ್ಲಿ ಮಾತ್ರ ಡಾಮಾರಿಕರಣವಾಗಿದೆ. ಉಳಿದ ಸ್ಥಳಗಳಲ್ಲಿ ಜಲ್ಲಿ ಹಾಕುವುದು, ರಸ್ತೆ ಅಗೆಯುವುದು ಮುಂದುವರೆದಿದೆ. ಉಜಿರೆ ಪರಿಸರದಲ್ಲಿ ಡಾಮರೀಕರಣ ಆರಂಭವಾದಾಗ ಉಳಿದ ಸ್ಥಳಗಳಲ್ಲೂ ಬೇಗನೆ ಕೆಲಸ ಸಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಾಹನ ಸವಾರರು ಹಾಗೂ ಸ್ಥಳೀಯರಿಗೆ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ನಿರಾಸೆ ಮೂಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕಾಲಿಡಲಿದೆ. ರಸ್ತೆಯ ಕೆಲಸ ಇದೇ ರೀತಿಯಲ್ಲಿ ನಿಧಾನವಾಗಿ ಮುಂದುವರಿದರೆ ಅಗೆದು ಹಾಕಲಾದ ರಸ್ತೆಯಲ್ಲಿ ಕೆಸರು ಶೇಖರಣೆಗೊಂಡಲ್ಲಿ ಡಾಮರೀಕರಣ ನಡೆಸುವುದು ಅಸಾಧ್ಯ. ಮಳೆನೀರು ಸರಾಗವಾಗಿ ಹರಿಯುತ್ತಿದ್ದ ಹಳೆಯ ಚರಂಡಿಗಳನ್ನೆಲ್ಲ ಹೊಸ ಕಾಮಗಾರಿಗಾಗಿ ಮುಚ್ಚಿ ಹಾಕಲಾಗಿದ್ದು; ಪ್ರಸ್ತುತ ಮಳೆ ನೀರು ರಸ್ತೆಯ ಮೇಲೆಯೇ ಹರಿಯುವಂತಾಗಿದೆ. ಇದರಿಂದ ಕೆಲವೆಡೆ ನಡೆಸಿರುವ ಪ್ರಾಥಮಿಕ ಕಾಮಗಾರಿ ಮತ್ತೊಮ್ಮೆ ನಡೆಸಬೇಕಾದ ಅನಿವಾರ್ಯತೆಯಿದೆ. ಮಳೆ ನೀರು ಇದೇ ರೀತಿ ರಸ್ತೆಯಲ್ಲಿ ಹರಿದರೆ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡಲಿದೆ. ಇದು ವಾಹನ ಸವಾರರಿಗೆ ನಿತ್ಯ ಮುಗಿಯದ ಗೋಳಾಗಿ ಪರಿಣಮಿಸಲಿದೆ.ಸೋಮಂತಡ್ಕ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿಗಾಗಿ ಹೊಸದಾಗಿ ಚರಂಡಿಗಳನ್ನು ನಿರ್ಮಿಸಲಾಗಿದ್ದು; ಇದರ ಅರ್ಧದಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಹಳೆ ಚರಂಡಿಗಳನ್ನು ಮುಚ್ಚಿ ಹಾಕಿ ಹೊಸ ಚರಂಡಿ ನಿರ್ಮಾಣ ಆರಂಭಿಸಲಾಗಿದೆ. ಆದರೆ ಇಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೆ ಮಳೆ ನೀರು ರಸ್ತೆಗೆ ನುಗ್ಗುತ್ತಿದ್ದು, ಮಳೆಯ ಬಳಿಕ ರಸ್ತೆ ಬದಿ ಕೆರೆಯಂತಾಗಿದೆ. ಇದರಿಂದ ಅಂಗಡಿಗಳಿಗೆ ತೆರಳಲು ಜನ ಹರಸಾಹಸ ಪಡಬೇಕಾಗಿದ ದುಸ್ಥಿತಿ ಎದುರಾಗಿದೆ. ಸಾಮಾನ್ಯ ಮಳೆಗೆ ಈ ಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ಬಿರುಸಾದ ಮಳೆ ಸುರಿದಾಗ ನೀರು ಅಂಗಡಿ, ಮನೆಗಳಿಗೂ ನುಗ್ಗುವ ಸಾಧ್ಯತೆ ಇದೆ. ರಸ್ತೆ ಬದಿ ಹೆಚ್ಚಿನ ಪ್ಲಾಸ್ಟಿಕ್ ಹಾಗು ಇತರ ತ್ಯಾಜ್ಯವಸ್ತು ಮಳೆ ನೀರಿನೊಂದಿಗೆ ಬೆರೆತು ಸೊಳ್ಳೆಗಳ ಉತ್ಪತ್ತಿ ತಾಣವಾಗಲಿದೆ.ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ಯಾವ ರೀತಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಚರಂಡಿ ವ್ಯವಸ್ಥೆ ಮಳೆಗಾಲ ಆರಂಭಕ್ಕೆ ಮೊದಲು ಪೂರ್ಣಗೊಳ್ಳುವುದು ಅನುಮಾನವಾಗಿದೆ.ಚಾರ್ಮಾಡಿ ಘಾಟಿ ಭಾಗದಲ್ಲಿ ಮೇ 14ರ ಸಂಜೆಯಿಂದಲೇ ಎಡಬಿಡದೆ ಮಳೆ ಸುರಿದಿದೆ. ಇದರಿಂದ ಮೃತ್ಯುಂಜಯ ನದಿಯಲ್ಲಿ ಮೇ 15ರ ಬೆಳಿಗ್ಗೆ ಏಕಾಏಕಿ ನೀರಿನ ಹರಿವು ಹೆಚ್ಚಿದೆ. ಸಾಮಾನ್ಯ ಪ್ರವಾಹದಂತೆ ಹರಿದ ನೀರು ಕಿಂಡಿ ಅಣೆಕಟ್ಟುಗಳ ಮೇಲ್ಭಾಗದಲ್ಲಿ ಹರಿದು ಮಳೆಗಾಲದ ದಿನಗಳನ್ನು ನೆನಪಿಸಿತು. ಇದೀಗ ನದಿಯ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ತೆರವುಗೊಳಿಸಲು ಫಲಾನುಭವಿಗಳು ಮುಂದಾಗಿದ್ದು; ನದಿ ನೀರಿನ ಇಳಿಕೆಗಾಗಿ ಕಾಯುವಂತಾಗಿದೆ. ನದಿಯಲ್ಲಿ ನೀರು ತುಂಬಿ ಹರಿದಾಗ ಸ್ವಲ್ಪಮಟ್ಟಿನ ತ್ಯಾಜ್ಯವು ಕಿಂಡಿ ಅಣೆಕಟ್ಟೆಗಳಲ್ಲಿ ಶೇಖರಣೆಗೊಂಡಿದೆ.

Latest 5

Related Posts