ಬೆಳ್ತಂಗಡಿ: ಕರಾವಳಿ ಭಾಗ ಎಂದರೆ ಧಾರ್ಮಿಕ ಮತ್ತು ಸಂಸ್ಕಾರಯುತ ಶಿಕ್ಷಣದ ನೆಲೆ. ಇಲ್ಲಿಯ ಸೌಂದರ್ಯ ನೋಡಿದರೆ ಬದುಕಿನ ಸ್ವರ್ಗ ಇದ್ದಂತೆ. ನಾವು ಆಗಿನ ಕಾಲದ ಶಿಕ್ಷಣ ಪಡೆದ ರೀತಿ, ನಮ್ಮ ಬದುಕಿನ ರೀತಿ ನೋಡಿದರೆ ಇಂದಿನ ವಿದ್ಯಾರ್ಥಿಗಳು ಹಿರಿಯರು ಮಾಡಿದ ಪುಣ್ಯದ ಫಲವನ್ನು ಅನುಭವಿಸುತ್ತಿದ್ದಾರೆ ಎನ್ನಬಹುದು. ಕರಾವಳಿ ಭಾಗದ ಶಿಕ್ಷಣ ಕ್ರಾಂತಿಯಾಗಿ ಮೂಡಿಬರುತ್ತಿರುವ ಎಕ್ಸೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಭಾಗ್ಯ ವಿದ್ಯಾರ್ಥಿಗಳಿಗೆ ಸಿಕ್ಕಿರುವುದು ದೊಡ್ಡ ಅವಕಾಶ. ಸಂಸ್ಕಾರಯುತ ಕಲಿಕೆಯನ್ನು ತಾಳ್ಮೆಯಿಂದ ಸ್ವೀಕರಿಸುವ ಮನೋಬಾವ ಬೆಳೆಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದು ಖ್ಯಾತ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. ಅವರು ಮೇ 22ರಂದು ಎಕ್ಸೆಲ್ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆಯಲ್ಲಿ ನಡೆದ ‘ಅಕ್ಷರೋತ್ಸವ-2024’ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಧ್ಯಾನ-ಚಿಂತನೆ ಬೆಳೆಯಬೇಕು. ಕರಾವಳಿ ಭಾಗದ ಯಕ್ಷಗಾನ ಕಲೆ ಯಾವುದೇ ಸರಕಾರದ ಹಂಗಿಲ್ಲದೆ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಬೆಳೆಯುತ್ತಿದೆ ಎಂದರೆ ಇದರ ಮಹತ್ವ ಹೇಗಿದೆ ಎಂದು ತಿಳಿಯಬೇಕು. ಇದು ಜಾಗತಿಕ ಕಲೆ; ಇದರ ಚಿತ್ರ ರಾಜ್ಯದ ಲಾಂಛನದಲ್ಲಿ ಬಳಸಬೇಕು. ಇಂತಹ ಕಲೆಯಿರುವ ನಾಡಿನಲ್ಲಿ ಮಕ್ಕಳು ಶಿಕ್ಷಣ ಪಡೆದರೆ ಮಕ್ಕಳು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಾರೆ ಎಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸುಬ್ಬಣ್ಣ ರೈ ‘ಅಕ್ಷರೋತ್ಸವ ಕವಿತೆಗಳು’ ಗ್ರಂಥ ಅನಾವರಣಗೊಳಿಸಿ ಮಾತನಾಡಿ; ನುಡಿದಂತೆ ನಡೆಯುವ ಸಂಕಲ್ಪ ಮಾಡಿದಾಗ ಮಾತ್ರ ಯಶಸ್ಸು. ಯಶಸ್ಸಿನ ಹಾದಿಗೆ ಅಡೆತಡೆ ಇದ್ದೆ ಇದೆ; ಅದನ್ನು ಮೆಟ್ಟಿ ನಿಲ್ಲುವುದೇ ಸಾದನೆ. ಇಂದು ಎಕ್ಸೆಲ್ ಕಾಲೇಜಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅದ್ಯಕ್ಷ ಡಾ. ಶ್ರೀನಾಥ್ ಲೇಖಕ ಅಭಿರಾಮ್ ಬಿ.ಎಸ್. ರಚಿಸಿದ ‘ಅಚೀವರ್ಸ್ ಮ್ಯಾಥಮೆಟಿಕ್ಸ್’ ಪಠ್ಯಪುಸ್ತಕ ಅನಾವರಣಗೊಳಿಸಿದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನದ ಅದ್ಯಕ್ಷ ಸಂಪತ್ ಸುವರ್ಣ ಲೇಖನ ಪ್ರಭಾಕರ್ ರವರ ‘ಕಂಪ್ಯೂಟರ್ ಸೈನ್ಸ್ ಸ್ಕ್ಯಾನರ್’ ಪುಸ್ತಕ ಅನಾವರಣ ಗೊಳಿಸಿದರು. ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅದ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ರಿಯ, ತನ್ವಿ ಭಟ್ ಇವರನ್ನು ಒಂದು ಲಕ್ಷ ನಗದು ಮೊತ್ತದೊಂದಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಕಾಲೇಜಿನ ಯಶಸ್ವಿಗೆ ಶ್ರಮಿಸಿದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಅಭಿರಾಮ್ ವಂದಿಸಿದರು. ಮಕ್ಕಳು ವೈದ್ಯರಾಗಬೇಕು, ಇಂಜಿನಿಯರಿಂಗ್ ಅಗಬೇಕು ಎಂದು ಹೆತ್ತವರು ಕನಸು ಕಂಡರೆ ಎಕ್ಸೆಲ್ ಕಾಲೇಜು ಸಂಸ್ಕಾರಯುತ ಅತ್ಯುತ್ತಮ ವೈದ್ಯರಾಗಬೇಕು; ಅತ್ಯುತ್ತಮ ಇಂಜಿನಿಯರಿಂಗ್ ಆಗಬೇಕು ಎಂದು ಕನಸು ಕಾಣುತ್ತೇವೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಎಕ್ಸೆಲ್ ಕಾಲೇಜು ಪೋಷಕರ ಪಾತ್ರ ವಹಿಸುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ವಿಶ್ವಾಸದಿಂದ ಅಭಿಪ್ರಾಯಿಸಿದರು.






