ಬೆಳ್ತಂಗಡಿ: ಕೆಲ ದಿನಗಳ ಹಿಂದೆಯಷ್ಟೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಕಾರಣಕ್ಕಾಗಿ ಬೆಳ್ತಂಗಡಿ ಪೇಟೆಯ ಹೆದ್ದಾರಿ ಬದಿಯಲ್ಲಿ ಅಳವಡಿಸಲಾಗಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಗಂಡಸುತನ ಮೆರೆದಿದ್ದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಮತ್ತು ಅಧಿಕಾರಿಗಳು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಹೆದ್ದಾರಿ ಬದಿಯಲ್ಲೇ ಇಂದು ಪರವಾನಿಗೆ ಪಡೆಯದೇ ಕಾನೂನುಬಾಹಿರವಾಗಿ ಅಳವಡಿಸಲಾದ ಹತ್ತಾರು ವ್ಯಾವಹಾರಿಕ ಪ್ರಚಾರದ ಫ್ಲೆಕ್ಸ್‌ಗಳನ್ನು ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ಮನದಲ್ಲಿ ಸಾಕಷ್ಟು ಅನುಮಾನ ಸೃಷ್ಟಿಸಿದೆ. ಅದರಲ್ಲೂ ಈ ಅನಧಿಕೃತ ವ್ಯಾವಹಾರಿಕ ಪ್ರಚಾರದ ಕೆಲ ಫ್ಲೆಕ್ಸ್‌ಗಳು ಹೆದ್ದಾರಿ ಬದಿಯಲ್ಲಿರುವ ಹೈಟೆನ್ಷನ್ ವಯರ್‌ನ ಕಂಬಗಳ ಮೇಲೆಯೇ ರಾರಾಜಿಸುತ್ತಿದ್ದು; ಮೆಸ್ಕಾಂ ಇಲಾಖಾಧಿಕಾರಿಗಳೂ ಕಾನೂನು ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಬೆಳ್ತಂಗಡಿಯಲ್ಲೂ ಫ್ಲಕ್ಸ್ ಅಳವಡಿಸುವ ಸಂದರ್ಭ ವಿದ್ಯುತ್ ವಯರ್ ತಾಗಿ ಯುವಕನೋರ್ವ ಮೃತಪಟ್ಟ ಘಟನೆ ಜನಮಾನಸದಲ್ಲಿ ಇಂದಿಗೂ ಹಸಿರಾಗಿದೆ. ನಂತರದ ದಿನಗಳಲ್ಲಿ ಬೆಳ್ತಂಗಡಿಯ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸಲು ಯಾರಿಗೂ ಅವಕಾಶ ನೀಡದೇ ಕಠಿಣ ನಿಲುವು ತಳೆದಿದ್ದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ಮತ್ತು ಅಧಿಕಾರಿಗಳೂ ಅನಧಿಕೃತ ಫ್ಲೆಕ್ಸ್‌ಗಳ ಬಗ್ಗೆ ಕಣ್ಗಾವಲು ಇರಿಸಿ, ಫ್ಲೆಕ್ಸ್ ಅಳವಡಿಕೆಗೆ ಪರವಾನಿಗೆ ಪಡೆಯುವ ಜೊತೆಗೆ ನಿಯಮಾವಳಿ ಪಾಲಿಸಲು ಸೂಚಿಸುತ್ತಿದ್ದರು. ಆದರೆ ಇಂದು ಫ್ಲಕ್ಸ್ ಅಳವಡಿಸಲು ಪರವಾನಿಗೆಯೂ ಬೇಕಾಗಿಲ್ಲ, ಯಾವುದೇ ನಿಯಮಾವಳಿಗಳೂ ಇಲ್ಲ ಎನ್ನಲು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಾರಾಜಿಸುತ್ತಿರುವ ಹತ್ತಾರು ಅನಧಿಕೃತ ಫ್ಲೆಕ್ಸ್‌ಗಳೇ ಪ್ರತ್ಯಕ್ಷ ಸಾಕ್ಷಿ. ಕೆಲ ವ್ಯಾವಹಾರಿಕ ಫ್ಲೆಕ್ಸ್‌ಗಳಂತೂ ವಿದ್ಯುತ್ ಕಂಬಗಳಲ್ಲಿ ರಾಜಾರೋಷವಾಗಿ ರಾರಾಜಿಸುತ್ತಿದೆ; ಈ ಬಗ್ಗೆ ಬೆಳ್ತಂಗಡಿಯ ಮೆಸ್ಕಾಂ ಅಧಿಕಾರಿಗಳು ಯಾಕೆ ಮೂಕ ಪ್ರೇಕ್ಷಕರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಈ ಹಿಂದೆ ವಿದ್ಯುತ್ ಕಂಬಗಳ ಮೇಲೆ ಯಾರೇ ಫ್ಲೆಕ್ಸ್ ಅಳವಡಿಸಿದರೂ ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇಂದು ಇವರಿಗೇನಾಗಿದೆ? ಅನಧಿಕೃತ ಫ್ಲೆಕ್ಸ್‌ಗಳ ಬಗ್ಗೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಮತ್ತು ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ಜನ ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಕಾಯುತ್ತಿದ್ದಾರೆ.






