ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪರವಾನಿಗೆ ಇಲ್ಲದೇ ಕಾನೂನುಬಾಹಿರವಾಗಿ ವಿದ್ಯುತ್ ಕಂಬಗಳನ್ನು ಬಳಸಿ ಅಪಾಯಕಾರಿಯಾಗಿ ಸಾಕಷ್ಟು ಫ್ಲೆಕ್ಸ್ಗಳನ್ನು ಅಳವಡಿಸಿರುವ ಬಗ್ಗೆ ಜೈಕನ್ನಡಮ್ಮ ನಿನ್ನೆಯಷ್ಟೇ (ಮೇ30) ವರದಿ ಮಾಡಿತ್ತು. ಸಾಮಾಜಿಕ ಕಾಳಜಿಯ ಈ ಜನಪರ ವರದಿಯಿಂದ ಎಚ್ಚೆತ್ತ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ, ಮುಖ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗದವರು ಇಂದು (ಮೇ 31)ರಂದು ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಎಲ್ಲ ಅನಧಿಕೃತ ಫ್ಲೆಕ್ಸ್ಗಳನ್ನು ತೆರವುಗೊಳಿಸಿ, ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಮ್ಮ ವರದಿಯಿಂದ ಮಾಹಿತಿ ಪಡೆದು ವರದಿಯ ಫಲಶ್ರುತಿಯೋ ಎಂಬಂತೆ ತಕ್ಷಣ ಕಾರ್ಯಾಚರಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಿಗೆ ಅಭಿನಂದನೆಗಳು.ಕಾರ್ಯಾಂಗ ಕಾರ್ಯಾಚರಿಸಲು ಜನಪ್ರತಿನಿಧಿಗಳ ತೊಡರುಗಾಲು ಇಲ್ಲದಿದ್ದರೆ ಯಾವ ರೀತಿ ತಕ್ಷಣ ಕಾರ್ಯಪ್ರವೃತ್ತರಾಗಬಹುದು ಎಂಬುವುದಕ್ಕೆ ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಇಂದಿನ ಕಾರ್ಯಾಚರಣೆ ಪ್ರತ್ಯಕ್ಷ ಉದಾಹರಣೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಚುನಾಯಿತ ಆಡಳಿತ ಮಂಡಳಿ ವಸ್ತುಶಃ ಅಮಾನತಿನಲ್ಲಿರುವುದರಿಂದ ಇಲ್ಲಿ ಅಧಿಕಾರಿಗಳ ಕಾರ್ಯಕ್ಕೆ ಸದಸ್ಯರು ಅಡ್ಡಿಪಡಿಸುವಂತಿಲ್ಲ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಶಾಸಕರ ಸಹಿತ ಯಾವೊಬ್ಬ ಜನಪ್ರತಿನಿಧಿಯೂ ಕಾರ್ಯಾಂಗದ ಕರ್ತವ್ಯದಲ್ಲಿ ಮೂಗು ತೂರಿಸುವಂತಿಲ್ಲ. ಅಧಿಕಾರಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಯಾರ ಭಯವೂ ಇಲ್ಲ.







