ಬೆಳ್ತಂಗಡಿ: ಪೂಜೆ ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ. ಪೂಜೆಯಿಂದ ನಮ್ಮ ಇಷ್ಟಾರ್ಥ ಸಿದ್ಧಿಯಾಗುವುದು. ತುಪ್ಪದಿಂದ ಹೋಮ ಹವನಾದಿಗಳನ್ನು ಮಾಡುತ್ತೇವೆ. ಹೋಮ ಹವನಾದಿಗಳು ನಮ್ಮ ಸ್ವಾರ್ಥಕ್ಕಾಗಿಯಲ್ಲ; ಧರ್ಮ ಕರ್ಮಗಳು ನಮಗಾಗಿಯಲ್ಲ; ಅದು ಸಮಸ್ತರ ಏಳಿಗೆಗಾಗಿ. ಭಕ್ತಿಯಿಂದ ಧರ್ಮ ಕರ್ಮಗಳನ್ನು ಮಾಡಿದರೆ ಇಡೀ ರಾಷ್ಟ್ರಕ್ಕೆ ಒಳಿತಾಗುವುದು. ನಾವು ದೇವರ ಪೂಜೆ ಮಾಡುವುದು ಯಾವತ್ತೂ ಭಕ್ತರಿಗೋಸ್ಕರ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ನುಡಿದರು. ಅವರು ಮೇ 31ರಂದು ಬೆಳ್ತಂಗಡಿ ಯ ಲಾಯ್ಲ ಶ್ರೀ ರಾಘವೇಂದ್ರ ಮಠದಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ವಿಠ್ಠಲ ದೇವರ ಸಂಸ್ಥಾನ ಪೂಜೆ ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿ ಹಾಗು ಶ್ರೀ ಮುಖ್ಯಪ್ರಾಣ ದೇವರಿಗೆ ಮಂಗಳಾರತಿ ಬೆಳಗಿ ನಂತರ ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು. ಶ್ರೀ ರಾಘವೇಂದ್ರ ಸ್ವಾಮಿ ಮತ್ತು ಮುಖ್ಯಪ್ರಾಣ ದೇವರು ಪರಮಾತ್ಮನ ಪರಮ ಭಕ್ತರು. ಪರಮಾತ್ಮನ ಆರಾಧನೆಯನ್ನು ರಾಘವೇಂದ್ರ ಸ್ವಾಮಿಗಳಿಂದ ಕಲಿಯಬೇಕು. ಇಲ್ಲಿ ಅವರೀರ್ವರ ಸಾನ್ನಿಧ್ಯವಿದ್ದು ಭಕ್ತರನ್ನು ಸದಾ ಅನುಗ್ರಹಿಸಲಿ ಎಂದು ಹೇಳಿದ ಶ್ರೀಗಳು ಮುಂದಿನ 2026 ಜನವರಿಯಿಂದ 2 ವರ್ಷ ಕಾಲ ಉಡುಪಿಯಲ್ಲಿ ತಮ್ಮ ಶ್ರೀ ಕೃಷ್ಣ ಪೂಜಾ ಪ್ರಥಮ ಪರ್ಯಾಯ ನಡೆಯಲಿದ್ದು; ಆ ಅವಧಿಯಲ್ಲಿ ಭಕ್ತರು ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣರ ದರ್ಶನ ಪಡೆದು ಧನ್ಯರಾಗುವಂತೆ ವಿನಂತಿಸಿಕೊಂಡರು. ಶ್ರೀ ರಾಘವೇಂದ್ರ ಮಠದ ಅರ್ಚಕ ರಾಘವೇಂದ್ರ ಭಾಂಗಿಣ್ಣಾಯ ದಂಪತಿ ಶ್ರೀಗಳವರಿಗೆ ಮಾಲಿಕೆ ಹಾಕಿ ಮಂಗಳಾರತಿ ನೆರವೆರಿಸಿದರು. ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಪೀತಾಂಬರ ಹೆರಾಜೆ ಅವರು ಶ್ರೀಗಳವರನ್ನು ಫಲಕಾಣಿಕೆ ನೀಡಿ ಮಾಲಾರ್ಪಣೆಗೈದು ಗೌರವಿಸಿದರು. ದಯಾಕರ ಭಟ್ ಕುತ್ಯಾರು, ಶೀರೂರು ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ಗುರುಗಳಾದ ವಿದ್ವಾನ್ ಅಕ್ಷಯ ಆಚಾರ್, ಕಾರ್ಯದರ್ಶಿ ರಾಮಣ್ಣ ಉಪಸ್ಥಿತರಿದ್ದರು. ಕ್ಷೇತ್ರದ ಭಕ್ತ ಹಾಗೂ ದಾನಿ ನಾರಾಯಣ ಬೇಗೂರು ಅವರನ್ನು ಶ್ರೀಗಳವರು ಗೌರವಿಸಿದರು. ಟ್ರಸ್ಟಿಗಳಾದ ವಸಂತ ಸುವರ್ಣ, ಶಂಕರ ಹೆಗ್ಡೆ, ಸೋಮೇ ಗೌಡ, ಮಹಾಬಲ ಶೆಟ್ಟಿ, ಜಯರಾಮ ಬಂಗೇರ, ಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುರೇಶ್ ಸ್ವಾಗತಿಸಿದರು. ಶ್ರೀಗಳವರು ನೆರೆದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.






