ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನೇತೃತ್ವದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕೇವಲ ಎರಡೇ ತಿಂಗಳಿನಲ್ಲಿ ಶ್ರಮದಾನದ ಮೂಲಕ ನವೀಕರಣಗೊಂಡ ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮೇ 31ರಂದು ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಶುಭ ಹಾರೈಸಿ ಮಾತನಾಡಿ; ಸಮಸ್ಯೆಯನ್ನು ಸೇವೆಯ ಅವಕಾಶವಾಗಿ ಪರಿವರ್ತಿಸಿ ಕೇವಲ ಎರಡು ತಿಂಗಳಿನಲ್ಲಿ ಶ್ರಮದಾನದ ಮೂಲಕ ಶಾಲಾ ಕಟ್ಟಡ ನವೀಕರಣಗೊಳಿಸಿರುವುದಕ್ಕೆ ಸಕ್ರಿಯ ಸಹಕಾರ ನೀಡಿದ ಎಲ್ಲರನ್ನೂ ಧನ್ಯತೆಯಿಂದ ಸ್ಮರಿಸಿದರು.ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿದ್ದಲ್ಲಿ ಕಲಿಯುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದ ಮಚ್ಚಿಮಲೆ,ವಿದ್ಯೆ ಮತ್ತು ಬೆಳಕು ಇತರರಿಗೆ ಕೊಟ್ಟಷ್ಟು ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಶುಭ ಹಾರೈಸಿದರು.ಶಾಲಾ ನವೀಕರಣ ಕಾರ್ಯದಲ್ಲಿ ಸಹಕರಿಸಿದ ರಜನೀಶ್, ಶಶಿ ಆಚಾರ್ ಬೆಳಾಲು, ಸುರೇಶ್, ಅಶೋಕ ನಾಯ್ಕ ಮತ್ತು ಮಧುಕರ ಅವರನ್ನು ಗೌರವಿಸಲಾಯಿತು.ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ ಕುಮಾರ್ ಮತ್ತು ರಾಜೇಶ್ ಪೈ; ಪುಷ್ಪರಾಜ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಮೋಹನ್, ಎಂಜಿನಿಯರ್ ವಿದ್ಯಾಕುಮಾರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಆರತಿ ಉಪಸ್ಥಿತಿರಿದ್ದರು.ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದವಿತ್ತರು.






