ಐತಿಹಾಸಿಕ ಸಂಶೋಧನೆಗಾಗಿ ಡಾ. ಉಮಾನಾಥ ಶೆಣೈ ಅವರಿಗೆ ಸಮ್ಮಾನ

ಐತಿಹಾಸಿಕ ಸಂಶೋಧನೆಗಾಗಿ ಡಾ. ಉಮಾನಾಥ ಶೆಣೈ ಅವರಿಗೆ ಸಮ್ಮಾನ
Facebook
Twitter
LinkedIn
WhatsApp

ಇತ್ತೀಚೆಗೆ ಗುರುವಾಯನಕೆರೆ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿರುವ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಕ್ಷರೋತ್ಸವ ಸಮಾರಂಭದಲ್ಲಿ ವಿಶೇಷ ಐತಿಹಾಸಿಕ ಸಂಶೋಧನೆ ಮಾಡಿರುವ ಡಾ. ಉಮಾನಾಥ ಶೆಣೈಯವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾಲೇಜು ಅಧ್ಯಾಪನದ ಜೊತೆಯಲ್ಲಿ ಡಾ. ಉಮಾನಾಥ ಶೆಣೈ ಅವರು ಅನೇಕ ಪ್ರಾಚೀನ ವಿಚಾರಗಳನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದು, ಅವುಗಳನ್ನು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನಾಗಿ ಮಂಡಿಸುವ ಮೂಲಕ ವಿದ್ವಾಂಸರ ಹಾಗೂ ಶ್ರೀಸಾಮಾನ್ಯರ ಗಮನಕ್ಕೆ ತರುತ್ತಿದ್ದರು. ನಾಡಿನ ಅನೇಕ ಐತಿಹಾಸಿಕ ಸ್ಥಳಗಳಿಗೆ ತನ್ನ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಕ್ಷೇತ್ರ ಅಧ್ಯಯನ ಕಾರ್ಯ ನಡೆಸುವ ಮೂಲಕ ವಿದ್ಯಾರ್ಥಿಗಳಿಗೂ ಸಂಶೋಧನಾ ತರಬೇತಿಯನ್ನು ಕೊಡುತ್ತಿದ್ದರು. ಮುಖ್ಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಉಗಮ ಮತ್ತು ಬೆಳವಣಿಗೆಯ ವಿವಿಧ ಹಂತಗಳನ್ನು ಗುರುತಿಸಿ, ಅವುಗಳ ಬಗ್ಗೆ ಸಂಶೋಧನೆ ನಡೆಸಿ ಹೊಸ ಬೆಳಕು ಚೆಲ್ಲಿದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಡಿಗ್ರಿಯನ್ನು ಪಡೆದಿದ್ದಾರೆ. ನಾಡಿನ ನೂರಾರು ಪ್ರಾಚೀನ ಸ್ಮಾರಕ, ಜಿನಾಲಯ, ದೇವಾಲಯಗಳು, ಪ್ರಾಚೀನ ಶಿಲ್ಪಕಲೆ ಹಾಗೂ ತಾಮ್ರಶಾಸನ ಇತ್ಯಾದಿಗಳನ್ನು ಸಂಶೋಧಿಸಿ ಅಧ್ಯಯನ ಮಾಡಿ ಸೂಕ್ತ ವಿವರಗಳೊಂದಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಾಶನಗೊಳಿಸಿದ್ದರು. 300ಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದು ಪ್ರಕಟಿಸಿದ್ದಾರೆ. ವಿವಿಧ ಐತಿಹಾಸಿಕ ವಿಷಯಗಳ ಮೇಲೆ 24 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿರುವ ಸುಮಾರು 298 ಜೈನ ಬಸದಿಗಳ ಬಗ್ಗೆ ಒಂದು ಸಂಪುಟವನ್ನು ವರ್ಣ ಚಿತ್ರಗಳೊಂದಿಗೆ ಬರೆದು ಪ್ರಕಟಗೊಳಿಸಿದ್ದಾರೆ. ಇವರ ಸಾಧನೆಗಳನ್ನು ಪರಿಗಣಿಸಿ ಮೂಡಬಿದ್ರೆಯ ಶ್ರೀ ಜೈನ ಮಠ ‘ಜಿನವಾಣಿ ಪುರಸ್ಕಾರ’, ಶ್ರವಣಬೆಳಗೊಳದ ಪ್ರಾಕೃತ ವಿದ್ಯಾಪೀಠ ‘ಗೊಮ್ಮಟೇಶ್ವರ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ’, ಸಿದ್ದಗಂಗಾ ಮಠ ‘ಸಿದ್ದಗಂಗಾ ಶ್ರೀ ಸದ್ಭಾವ ರಾಷ್ಟ್ರೀಯ ಪ್ರಶಸ್ತಿ’, ‘ಸಂಗಮ ರತ್ನ ಪ್ರಶಸ್ತಿ’, ‘ವಿಶ್ವ ಕೊಂಕಣಿ ಪ್ರಶಸ್ತಿ’, ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ’, ‘ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ ಇತ್ಯಾದಿಗಳಿಂದ ಸಮ್ಮಾನಿತರಾದುದನ್ನು ಸ್ಮರಿಸಿ, ಈ ಸಮಾರಂಭದಲ್ಲಿ ‘ಎಕ್ಸೆಲ್ ಅಕ್ಷರ ಗೌರವ’ ಪುರಸ್ಕಾರವನಿತ್ತು ಗೌರವಿಸಲಾಯಿತು.

Latest 5

Related Posts