ಜಡಿಮಳೆಗೆ ಅಪಾರ ಹಾನಿ : ಕಂಗಾಲಾದ ಜನತೆ

ಜಡಿಮಳೆಗೆ ಅಪಾರ ಹಾನಿ : ಕಂಗಾಲಾದ ಜನತೆ
Facebook
Twitter
LinkedIn
WhatsApp

ಬೆಳ್ತಂಗಡಿ: ಜುಲೈ 30ರಂದು ಇಡೀ ದಿನ ಸುರಿದ ಭಾರೀ ಮಳೆಯಿಂದ ಹೆದ್ದಾರಿ ಚರಂಡಿ, ತೋಡು, ಹೊಳೆ, ನದಿಗಳು ತುಂಬಿ ಹರಿದು ಹಲವೆಡೆ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತ ವ್ಯಸ್ತವಾದ ಘಟನೆ ವರದಿಯಾಗಿದೆ. ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟ ಮುಳುಗಡೆಯಾಗಿ ಅಪಾಯಮಟ್ಟದಲ್ಲಿ ನೀರು ತುಂಬಿ ಹರಿಯುತ್ತಿದೆ. ಬೆಳ್ತಂಗಡಿ-ಸರಳೀಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆ ಗುಡ್ಡೆ ಕುಸಿದ ಕಾರಣ ಸಂಪೂರ್ಣ ಬಂದ್ ಆಗಿದೆ. ಬಾರ್ಯ ಗ್ರಾಮದ ಪಂಜುಕ್ಕು ಎಂಬಲ್ಲಿ ಮಣಿಹಳ್ಳ – ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡೆ ಕುಸಿದು ಬಿದ್ದ ಕಾರಣ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬದಲಿ ರಸ್ತೆಯನ್ನು ಪ್ರಯಾಣಿಕರು ಬಳಸುತ್ತಿದ್ದಾರೆ. ಪಂಜುಕ್ಕು ಪ್ರಯಾಣಿಕರ ತಂಗುದಾಣದ ಬಳಿಯೇ ಈ ಘಟನೆ ನಡೆದಿದ್ದು, ಸುದೈವವಶಾತ್ ಬಸ್ ನಿಲ್ದಾಣಕ್ಕೆ ಯಾವುದೇ ಹಾನಿಯಾಗಿಲ್ಲ.ತಾಲೂಕಿನ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಪ್ಪಿನಂಗಡಿ, ಪುತ್ತೂರು, ಬಿ.ಸಿ ರೋಡಿಗೆ ತೆರಳುವ ಪ್ರಯಾಣಿಕರು ಬದಲಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ. ಕಲ್ಮಂಜ ಗ್ರಾಮದ ಕನ್ಯಾಡಿ ಬಜಿಲ ರಸ್ತೆ ಶ್ರೀ ಗಣೇಶ್ ರೆಸಿಡೆನ್ಸಿ ಬಳಿ ರಸ್ತೆಗೆ ನೀರು ನುಗ್ಗಿದೆ. ಓಡಿಲ್ನಾಳ ಗ್ರಾಮದ ಬಟ್ಟೆಮಾರ್ ದರ್ಣಪ್ಪ ಪೂಜಾರಿ ಯವರ ಮನೆಗೆ ಗುಡ್ಡ ಕುಸಿದು ಹಾನಿಯಾದ ಘಟನೆ ಜುಲೈ 29 ರಂದು ರಾತ್ರಿ ವರದಿಯಾಗಿದೆ‌. ಕುವೆಟ್ಟು ಗ್ರಾಮದ ಮದ್ದಡ್ಕದಿಂದ ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಸಮೀಪ ಮಳೆ ನೀರು ಹರಿದು ಕೆಲವು ಕೃಷಿಕರ ತೋಟ ಜಲಾವೃತವಾಗಿದೆ. ಲಾಯ್ಲದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪುತ್ರ ಬೈಲು-ಲಾಯ್ಲ ರಸ್ತೆಗೆ ನೀರು ನುಗ್ಗಿ ಸಂಚಾರ ಬಂದ್ ಆಗಿದೆ. ಮಿತ್ತ ಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪಕ್ಕದಲ್ಲಿ ಹಾಜಿರಾ ಆಲಿಕುಂಞಿ ಅವರ ಮನೆಯ ಬಳಿ ಗುಡ್ಡ ಕುಸಿತದಿಂದ ಮಣ್ಣು ಮನೆಯ ಹತ್ತಿರದ ವರೆಗೂ ಬಂದಿರುತ್ತಿದೆ. ಶಾಲೆಯ ಕಂಪೌಂಡಿಗೂ ತೊಂದರೆಯಾಗುವ ಪರಿಸ್ಥಿತಿ ಇದೆ. ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನರ್ಪ ಬೆಳ್ಳೂರು ಬೈಲು ಎಂಬಲ್ಲಿ ಭಾರೀ ಗಾಳಿಮಳೆಗೆ ಬೇಬಿ ಕೋಂ ಆನಂದರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಗ್ರಾಮ ಪಂಚಾಯತ್ ನಿಂದ ಭೇಟಿ ನೀಡಿ ಸದ್ರಿಯವರನ್ನು ಪಕ್ಕದಲ್ಲಿ ಇರುವ ಅವರ ಅಣ್ಣನ ಮನೆಗೆ ಸ್ಥಳಾಂತರಿಸಲಾಗಿದೆ. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಬಳಿ ತಡೆಗೋಡೆ ಕುಸಿದು ಪಾರ್ಕ್ ಮಾಡಲಾಗಿದ್ದ 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಮಣ್ಣಿನ ಅಡಿ ಸಿಲುಕಿಕೊಂಡಿದ್ದು ಪಕ್ಕದ ಮನೆಯೂ ಅಪಾಯ ಸ್ಥಿತಿಯಲ್ಲಿದೆ. ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಒಳಗೆ ನೀರು ನುಗ್ಗಿದ್ದು, ದೇವಸ್ಥಾನದ ಸುತ್ತ ಕಟ್ಟಿದ್ದ ಕಂಪೌಂಡ್ ಕುಸಿತಗೊಂಡಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೈಲೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ದೇವಸ್ಥಾನದ ಸಮೀಪ ಧರೆ ಕುಸಿತಕ್ಕೊಳಗಾಗಿದೆ. ಜಡಿಮಳೆಗೆ ನೀರು ಉಕ್ಕಿ ಹರಿದು ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದೆ. ಮೇಲಂತಬೆಟ್ಟು ಗ್ರಾಮದಲ್ಲಿ ಆನೇಕ ಕಡೆಗಳಲ್ಲಿ ಗುಡ್ಡ ಕುಸಿತ, ಮನೆ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಮಾರು ಭಾಗದ ಬಷೀರ್ ಇವರ ಮನೆ ಪಕ್ಕದ ಭೂಮಿ ಕುಸಿಯುವ ಹಂತದಲ್ಲಿದ್ದು ಕೆಳಗಿನ ಮನೆಯವರಾದ ಸಿದ್ದಿಕ್ ಕಜೇಮಾರ್, ಗಿರಿಜಾ ಕೋಂ ತಿಮ್ಮಪ್ಪಗೌಡ ಇವರ ಮನೆಗಳಿಗೆ ಅಪಾಯವಿದ್ದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆಗುವಂತೆ ಗ್ರಾಮ ಪಂಚಾಯತ್ ಸದಸ್ಯ ಫೈಝಲ್ ತಿಳಿಸಿದ್ದಾರೆ, ಬೆಳ್ತಂಗಡಿ ಬಿಷಪ್ ಹೌಸ್ ತೋಟ ಸಂಪೂರ್ಣ ಜಲಾವೃತ ವಾಗಿದ್ದು ಬಿಷಪ್ ಹೌಸ್ ಒಳಗೆ ನೀರು‌ ನುಗ್ಗುವ ಭೀತಿಯಿದೆ. ಮೇಲಂತಬೆಟ್ಟು ಪಕ್ಕಿದಕಲ ಕಿರು ಸೇತುವೆ ಜಲಾವೃತವಾಗಿದ್ದು ಸಂಪರ್ಕ ಕಡಿತಗೊಂಡಿದೆ. ಅಕ್ಕದ ಪಕ್ಕದ ತೋಟಗಳಿಗೆ ನೆರೆ ನೀರು ನುಗ್ಗಿ ಅನಾಹುತವಾಗಿದೆ . ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿತ್ತು. ವೇಣೂರಿನಲ್ಲಿ ಧರೆ ಕುಸಿತದಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕ ರಸ್ತೆಯ ಕಿರು ಸೇತುವೆ ತೀವ್ರ ಮಳೆಗೆ ಮುರಿದು ಸಂಪರ್ಕ ಕಡಿತಗೊಂಡಿದ್ದು ಸುಮಾರು 60 ಮನೆಗಳು ಸಂಪರ್ಕ ಕಡಿತಗೊಂಡಿದ್ದು ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಪರಿಶೀಲಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುತ್ತೂರಿನ ಸಹಾಯಕ ಆಯುಕ್ತರು, ಬೆಳ್ತಂಗಡಿಯ ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ಪಂಚಾಯತ್ ಕಾರ್ಯದರ್ಶಿ ಸ್ಥಳದಲ್ಲಿ ಹಾಜರಿದ್ದರು.

Latest 5

Related Posts