ಬೆಳ್ತಂಗಡಿ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಕಲಿಯುಗದ ಕಾಮದೇನು ಹಾಗೂ ಕಲ್ಪವೃಕ್ಷ ಎಂದೇ ಭಕ್ತರು ನಂಬುತ್ತಾರೆ. ಭಕ್ತರ ಬೇಡಿಕೆ ಈಡೇರಿಸುವ ಶ್ರೀ ರಾಯರಲ್ಲಿ ಭಕ್ತರು ಉತ್ತಮ ಮನಸ್ಸಿನಿಂದ ಪ್ರಾರ್ಥಿಸಬೇಕು. ಸಂತರು ಹಾಗೂ ದಾರ್ಶನಿಕರು ಸಮಾಜಕ್ಕೆ ನೀಡಿದ ಸಂದೇಶವನ್ನು ಸದ್ವಿಚಾರಗಳನ್ನು ನೆನಪಿಸಲು ಇಂತಹ ಆರಾದನೆಗಳನ್ನು ಆಚರಿಸಲಾಗುತ್ತಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ ಹೇಳಿದರು. ಅವರು ಆಗಸ್ಟ್ 21ರಂದು ಲಾಯ್ಲ ಶ್ರೀ ಗುರುರಾಘವೇಂದ್ರ ಮಠದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಧರ್ಮ ಇರೋದು ಮಾನವನ ರಕ್ಷಣೆಗಾಗಿ; ಆದ್ದರಿಂದ ಧರ್ಮವನ್ನು ಆಚರಿಸಿ ರಕ್ಷಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಅಭಿಪ್ರಾಯಿಸಿದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲರನ್ನು ಸಮ್ಮಾನಿಸಲಾಯಿತು. ಚೈತ್ರೇಶ್ ಇಳಂತಿಲ ಸಮ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ದಾನಿಗಳಾದ ಬೆಂಗಳೂರಿನ ನಾರಾಯಣ ಬೇಗೂರು ಹಾಗೂ ಕುಂದಾಪುರದ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಲಯನ್ ಸುರೇಶ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಪ್ಪ ಪೂಜಾರಿ ಸ್ಯಾಗತಿಸಿದರು. ಟ್ರಸ್ಟ್‌ನ ಗೌರವ ಸಲಹೆಗಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಮಂಜುನಾಥ ರೈ ಸಂದೇಶ ವಾಚಿಸಿದರು. ಟ್ರಸ್ಟ್‌ನ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಟ್ರಸ್ಟಿ ಸೋಮೇ ಗೌಡ, ಮೋಹನ್ ರಾವ್ ಉಜಿರೆ, ಕೃಷ್ಣ ಶೆಟ್ಟಿ ಸಹಕರಿಸಿದರು. ಟ್ರಸ್ಟಿನ ಕಾರ್ಯದರ್ಶಿನ ವಸಂತ ಸುವರ್ಣ ವಂದಿಸಿದರು.






